ಪದವಿ ಪೂರ್ವ ಉಪನಿರ್ದೇಶಕರ ಕಚೇರಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ
ಚಿಕ್ಕೋಡಿ, 16; ಬೆಳಗಾವಿ, ವಿಜಯಪೂರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಪದವಿ ಪೂರ್ವ ಉಪನಿರ್ದೇಶಕರ ಕಚೇರಿಗೆ ಅನುದಾನ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಎಂದು ವಾಯವ್ಯ ಶಿಕ್ಷಕರ ಮತಕ್ಷೇತ್ರ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಚಿಕ್ಕೋಡಿ ನಗರದಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಪದವಿ ಪೂರ್ವ ಉಪನಿರ್ದೇಶಕರ ಕಚೇರಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಶಿಕ್ಷಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸುತ್ತಿದ್ದಾರೆ ಎಂದರು. ಬೆಳಗಾವಿ, ಬಾಗಲಕೋಟ, ವಿಜಯಪೂರ ಮತ್ತು ಚಿಕ್ಕೋಡಿ ಜಿಲ್ಲೆಯಲ್ಲಿ ಶಿಕ್ಷಕರ ಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಸುಮಾರು 76 ಕೋಟಿ ರೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಖರ್ಚು ಮಾಡಲಾಗಿದೆ. ಕಳೆದ 2017ರಲ್ಲಿ ಚಿಕ್ಕೋಡಿಗೆ ಪಿಯು ಡಿಡಿಪಿಯು ಕಚೇರಿ ಮಂಜೂರಾಗಿತ್ತು. ಇದೀಗ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಬೆಳಗಾವಿ, ವಿಜಯಪೂರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಪಿಯು ಡಿಡಿಪಿಯು ಕಚೇರಿಯ ನೂತನ ಕಟ್ಟಡಕ್ಕೆ ಅನುದಾನ ಒದಗಿಸಲಾಗುತ್ತದೆ ಎಂದರು. ಚಿಕ್ಕೋಡಿ-ಸದಲಗಾ ಕ್ಷೇತ್ರ ವ್ಯಾಪ್ತಿಯ ಹೆಚ್ಚು ಮಕ್ಕಳ ಸಂಖ್ಯೆ ಹೊಂದಿರುವ ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜು ಮಂಜೂರಾಗಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು. ಪದವಿ ಕಾಲೇಜುಗಳಿಗೆ ಪ್ರಸ್ತಾವಣೆ ಸಲ್ಲಿಸಬೆಕು. ಸದಲಗಾ ಪಟ್ಟಣದಲ್ಲಿ ಇರುವ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಶಿಕ್ಷಣ ಸುಧಾರಣೆ ಆಗಲು ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದೆ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆಸಕ್ತಿ ವಹಿಸಬೇಕು. ಶಿಕ್ಷಣ ಇಲಾಖೆಯ ಮೂಲಭೂತ ಸೌಲಭ್ಯ ಒದಗಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಕ್ಕಳಿಗೆ ಮನವರಿಕೆಯಾಗಲು ಶಿಕ್ಷಣ ನೀಡಿ ಮಕ್ಕಳನ್ನು ಪ್ರೋತ್ಸಾಹ ಮಾಡುವ ಕೆಲಸ ಶಿಕ್ಷಕರ ಮೇಲಿದೆ ಎಂದರು. ಖಡಿಪಿಐ ಎಂ.ಎನ್.ಸೀತಾರಾಮ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಣ ಅಭಿವೃದ್ಧಿಯಾಗಲು ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಹಗಲಿರುಳು ಶ್ರಮೀಸುತ್ತಾರೆ. ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರಿಗೆ ಮಕ್ಕಳಿಗೆ ಶಿಕ್ಷಣ ಸಿಗಲು ಪ್ರಯತ್ನ ಮಾಡಿ ಅನುದಾನ ತರುತ್ತಿದ್ದಾರೆ ಎಂದರು. ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀಶೈಲ ದೇಸಾಯಿ ಮಾತನಾಡಿ ಪದವಿ ಪೂರ್ವ ಕಾಳೇಜು ಉಪನಿರ್ದೇಶಕರ ಕಚೇರಿ ಕಟ್ಟಡಕ್ಕೆ 10 ಗುಂಟೆ ಜಾಗದಲ್ಲಿ 5 ಗುಂಟೆಯಲ್ಲಿ ಕಚೇರಿ ನಿರ್ಮಾಣ ಮಾಡಲಾಗುತ್ತದೆ. ಮೂರು ಅಥವಾ ನಾಲ್ಕು ತಿಂಗಳ ಅವಧಿಯಲ್ಲಿ ಕಟ್ಟಡ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಇಒ ಸ್ರೀಮತಿ ಪ್ರಭಾವತಿ ಪಾಟೀಲ, ಅಜೀತ ಮನ್ನಿಕೇರಿ, ಪುರಸಭೆ ಸದಸ್ಯರಾದ ರಾಮಾ ಮಾನೆ, ಗುಲಾಬ ಬಾಗವನ, ಮುದ್ದಸರ ಜಮಾದಾರ, ವಿನೋಧ ಮಾಳಗೆ, ಸಂದೀಪ ಶೆರಖಾನೆ, ಮುಖ್ಯೋಪಾಧ್ಯಾಯ ಸಂಜು ಹುಲ್ಲೋಳ್ಳಿ, ಡಯಟ ಪ್ರಾಚಾರ್ಯ ಎಸ್.ಎಂ.ಯಾದಗೂಡೆ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ, ಕಿರಣ ಪಾಟೀಲ, ಪ್ರಾಚಾರ್ಯರಾದ ಉತ್ತಮ ಶಿಂಧೆ, ಮಹಾದೇವ ತಳವಾರ, ಎಂ.ಆರ್.ಮುನ್ನೋಳ್ಳಿಕರ, ರಾವಸಾಹೇಬ ಫಕೀರೆ, ಎನ್.ಜಿ.ಪಾಟೀಲ ಮುಂತಾದವರು ಇದ್ದರು. ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ಪಿ.ಐ.ಭಂಡಾರಿ ಸ್ವಾಗತಿಸಿದರು. ಉಪನ್ಯಾಸಕ ಎನ್.ವ್ಹಿ.ಶಿರಗಾಂವಕರ ನಿರೂಪಿಸಿದರು. ಪ್ರಕಾಶ ಮನಗೂಳಿ ವಂದಿಸಿದರು.