ಸ್ವಹಿತಾಸಕ್ತಿ ಮರೆತು ಸಮಾಜಕ್ಕಾಗಿ ಬದುಕಿ: ಸಂದೀಪ ಪಾಟೀಲ

ಸ್ವಹಿತಾಸಕ್ತಿ ಮರೆತು ಸಮಾಜಕ್ಕಾಗಿ ಬದುಕಿ: ಸಂದೀಪ ಪಾಟೀಲ Forget self-interest and live for society: Sandeep Patil

ಬೆಳಗಾವಿ 12: ಮೂರು ತಲೆಮಾರುಗಳ ಹಿಂದಿನ ನಮ್ಮ ಪೂರ್ವಜರ ಹೆಸರು ಜನಸಾಮಾನ್ಯರಾದ ನಮಗೆ ನೆನಪಿರುವುದಿಲ್ಲ. ಆದರೆ ನೂರಾರು ವರ್ಷಗಳ ಹಿಂದೆ ಬದುಕಿ ಬಾಳಿದ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಮುಂತಾದ ಸಾಧಕರ ಹೆಸರು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದಕ್ಕೆ ಕಾರಣ ವೇನೆಂದರೆ ತನಗಾಗಿ ಬದುಕಿದವರನ್ನು ಸಮಾಜ ಎಂದಿಗೂ ನೆನಪಿಡುವುದಿಲ್ಲ. ಆದರೆ ಪರರಿಗಾಗಿ ಬದುಕಿದವರನ್ನು ಸಮಾಜ ಎಂದೂ ಮರೆಯುವುದಿಲ್ಲ. ಹೀಗಾಗಿ ಸ್ವ ಹಿತಾಸಕ್ತಿ ಮರೆತು ಪ್ರತಿಯೊಬ್ಬರೂ ಸಮಾಜಕ್ಕಾಗಿ ಬದುಕಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಅಭಿಪ್ರಾಯಪಟ್ಟರು. 

ಅವರು ಇಂದು ಶಿವಬಸವ ನಗರದ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಓಯಾಸಿಸ್ ಇಂಡಿಯಾ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಕಣ್ಣ ಮುಂದೆ ನಡೆಯುವ ಅಪರಾಧವನ್ನು ನೋಡಿ ಸುಮ್ಮನಿರುವುದು ಸಹ ಅಪರಾಧ. ಹೀಗಾಗಿ ಎಲ್ಲಿಯಾದರೂ ಅಪರಾಧ ನಡೆಯುತ್ತಿದ್ದರೆ ತಕ್ಷಣ ಅದನ್ನು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. 

ಮಹಿಳಾ ಕಲ್ಯಾಣ ಸಂಸ್ಥೆಯ ಎಮ್‌.ಎಸ್‌.ಚೌಗಲಾ, ಬೆಳಗಾವಿ ಅಸೋಸಿಯೇಷನ್ ಫಾರ್ ಸೈನ್ಸ್‌ ಎಜ್ಯುಕೇಶನ್ ಕಾರ್ಯದರ್ಶಿ ಮನೋಹರ ಉಳ್ಳೇಗಡ್ಡಿ, ಓಯಾಸಿಸ್ ಇಂಡಿಯಾ ಸಂಸ್ಥೆಯ ಡ್ಯಾನಿಯಲ್ ಮೋಗಮ್, ಸುರೇಖಾ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಕ್ರೈಸ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಬೀದಿ ನಾಟಕ ಎಲ್ಲರ ಮನಸೂರೆಗೊಂಡಿತು. ಪ್ರಾರಂಭದಲ್ಲಿ ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ಸ್ವಾಗತಿಸಿದರು. ನಮ್ಮೂರ ಬಾನುಲಿ ಕೇಂದ್ರದ ಚೇತನ ಕುಲಕರ್ಣಿ ನಿರೂಪಿಸಿ ವಂದಿಸಿದರು.