ಶಿಸುನಾಳ ಶರೀಫರ ಪ್ರಾಧಿಕಾರ ರಚನೆಗೆ ಒತ್ತಾಯ
ಶಿಗ್ಗಾವಿ 19: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕ ಸಮಿತಿಯ ವತಿಯಿಂದ ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಶಿಗ್ಗಾವಿ ತಹಸಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಮಿತಿ ಅಧ್ಯಕ್ಷ ರಾಮು ತಳವಾರ ಮಾತನಾಡಿ ಈ ಭಾಗದ ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರಾಧಿಕಾರ ರಚಿಸುವಂತೆ ಹಲವು ದಶಕಗಳಿಂದ ಒತ್ತಾಯಿಸುತ್ತಾ ಬಂದಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ, ಹಿಂದಿನ ಸರ್ಕಾರ ಶರೀಫ ಗಿರಿ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ನೀಡಿತ್ತು ಆದರೆ ಪ್ರಾಧಿಕಾರ ರಚನೆ ಸಾಧ್ಯವಾಗಿರಲಿಲ್ಲ, ಕಾರಣ ರಾಜ್ಯ ಸರ್ಕಾರ ಸದರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಧಿಕಾರ ಘೋಷಣೆಗೆ ಮುಂದಾಗಲು ಒತ್ತಾಯಿಸಿದರು.
ಶಿಗ್ಗಾವಿ ತಾಲೂಕ ಸಮಿತಿ ಅಧ್ಯಕ್ಷ ಸುರೇಶ ವನಹಳ್ಳಿ ಮಾತನಾಡಿ ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರ ಹೆಸರಿನಿಂದ ಪ್ರಾಧಿಕಾರ ರಚಿಸಿದರೆ ಅವರ ತತ್ವ ಮತ್ತು ಸಿದ್ದಾಂತವನ್ನು ಇನ್ನಷ್ಟು ಅಧ್ಯಯನ ಮಾಡಿ ನಾಡಿನಾದ್ಯಂತ ಪ್ರಸಾರ ಮಾಡಲು ಸಾಧ್ಯವಾಗುತ್ತದೆ, ಅಲ್ಲದೆ ಭಾವೈಕ್ಯತೆಗೆ ಹೆಸರಾಗಿರುವ ಈ ನಾಡಿನಲ್ಲಿ ಅವರ ತತ್ವ ಮತ್ತು ಸಿದ್ದಾಂತದ ಪ್ರಸಾರದಿಂದಾಗಿ ನಾಡಿನಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಕಾರಣ ಸರ್ಕಾರ ಕೂಡಲೇ ಶಿಶುನಾಳ ಶರೀಫರ ಹೆಸರಿನಿಂದ ಪ್ರಾಧಿಕಾರ ರಚನೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷರಾದ ರಮೇಶ್ ಹರಿಜನ, ತಾಲೂಕ ರೈತ ಘಟಕದ ಅಧ್ಯಕ್ಷರಾದ ವೀರಭದ್ರ ಗೌಡ್ರು ಪೊಲೀಸ್ ಗೌಡ್ರು, ತಾಲೂಕ ಕಾರ್ಮಿಕ ಘಟಕದ ಅಧ್ಯಕ್ಷರಾದ ಖಾಸಿಂಸಾಬ್ ಮುಲ್ಲಾ, ತಾಲೂಕ ಸಂಚಾಲಕರಾದ ರಮೇಶ್ ಈಟಿ, ಮಹಿಳಾ ಗೌರವಾಧ್ಯಕ್ಷರಾದ ಮಮ್ತಾಜ್ ಬಾಳಣ್ಣನವರ, ವರುಣ ಅಡರಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.