ಭವ್ಯ ಭವಿಷ್ಯದ ನಾಳೆಗೆ - ಬನ್ನಿ ಬನ್ನಿ ಶಾಲೆಗೆ : ಸಚಿವ ಎಚ್.ಕೆ.ಪಾಟೀಲ
For a great future tomorrow - come, come to school: Minister H.K. Patil
ಭವ್ಯ ಭವಿಷ್ಯದ ನಾಳೆಗೆ - ಬನ್ನಿ ಬನ್ನಿ ಶಾಲೆಗೆ : ಸಚಿವ ಎಚ್.ಕೆ.ಪಾಟೀಲ
ಗದಗ 04: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ಬಿಟ್ಟ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು. ಗದಗ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಗದಗ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಾರ್ಯಾಲಯ ಮತ್ತು ಸಿದ್ಧಲಿಂಗನಗರದ ಸರ್ಕಾರಿ ಪ್ರೌಢಶಾಲೆ ಯ ಸಂಯುಕ್ತಾಶ್ರಯದಲ್ಲಿ ಗದಗ ನಗರದ ಸಿದ್ಧಲಿಂಗ ನಗರದ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ( ಜೂನ್ 2 ) ಜರುಗಿದ ಭವ್ಯ ಭವಿಷ್ಯದ ನಾಳೆ - ಬನ್ನಿ ಬನ್ನಿ ಶಾಲೆಗೆ ಘೋಷವಾಕ್ಯದಡಿ ಏರಿ್ಡಸಿದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿದರು. ದೇಶ ಶ್ರೇಷ್ಠವಾಗಲು ಎಲ್ಲರೂ ಶಿಕ್ಷಣವಂತರಾಗುವ ಜೊತೆಗೆ ಸುಶಿಕ್ಷಿತರಾಗಬೇಕು. ಶಾಲೆಯಿಂದ ಹೊರಗುಳಿದ 6-14 ವಯೋಮಾನದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಮೂಲಕ ಶಿಕ್ಷಣ ನೀಡಬೇಕು. ಮಕ್ಕಳೆಲ್ಲರೂ ತಮ್ಮ ಭವ್ಯ ಭವಿಷ್ಯ ನಿರ್ಮಾಣಕ್ಕಾಗಿ ಶಾಲೆಗೆ ಬನ್ನಿ ಎಂದು ಸಚಿವ ಎಚ್.ಕೆ.ಪಾಟೀಲ ಅವರು ಮಕ್ಕಳಿಗೆ ಕರೆ ನೀಡಿದರು. ಎಲ್ಲ ಮಕ್ಕಳನ್ನು ಶಿಕ್ಷಣವಂತರಾಗಿಸುವುದು ಸರ್ಕಾರದ ಕಾಳಜಿ. ಎಲ್ಲರಿಗೂ ವಿದ್ಯೆ ಕಲಿಸಿ, ಘನತೆಯುತ ಜೀವನ ರೂಪಿಸುವ ಸದುದ್ದೇಶ ಶಿಕ್ಷಣ ನೀಡುವುದರಲ್ಲಿದೆ. ನಮ್ಮ ರಾಷ್ಟ್ರ ಶ್ರೇಷ್ಠ ರಾಷ್ಟ್ರವಾಗಿಸುವಲ್ಲಿ ಮಕ್ಕಳ ಶಿಕ್ಷಣ ನೀಡುವ ಜವಾಬ್ದಾರಿ ಅಧಿಕವಾಗಿದೆ ಎಂದು ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು. ಉತ್ತಮ ಜ್ಞಾನ ಹಾಗೂ ಕೌಶಲ್ಯಗಳ ಅಭಿವೃದ್ಧಿ, ಸೃಜನಾತ್ಮಕತೆ ಮತ್ತು ವಿಮರ್ಶಾತ್ಮಕ ಚಿಂತನೆಗಳ ಬೆಳವಣಿಗೆ , ಸಾಮಾಜಿಕ ಮತ್ತು ಭಾವನಾತ್ಮಕ ಮೌಲ್ಯಗಳ ಸುಧಾರಣೆ, ದೇಶಭಕ್ತಿ ಮತ್ತು ದೇಶಪ್ರೇಮ, ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಕುರಿತು ಅರಿವು ಮೂಡಿವುದು, ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಶಿಕ್ಷಣ ಈ ಎಲ್ಲವುಗಳು ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಆಗುವ ಪ್ರಯೋಜನಗಳಾಗಿವೆ. ಜೊತೆಗೆ ಶಾಲೆಗೆ ಬರುವ ಮಕ್ಕಳಿಗೆ ಸರ್ಕಾರದಿಂದಲೇ ಸಮವಸ್ತ್ರ , ಪುಸ್ತಕ ಹಾಗೂ ಮಧ್ಯಾಹ್ನದ ಊಟ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುವುದು . ಇವೆಲ್ಲವುಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಮಕ್ಕಳು ಶಿಕ್ಷಣ ಪಡೆಯಲು ಮುಂದಾಗಬೇಕು. ಹಾಗೂ ಪಾಲಕರೂ ಸಹ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ವಿಧಾನಪರಿಷತ್ ಶಾಸಕ ಎಸ್.ವಿ.ಸಂಕನೂರ ಮಾತನಾಡಿ ಮಕ್ಕಳು ಶಿಕ್ಷಣವಂತರಾಗಿಸುವಲ್ಲಿ ಸರ್ಕಾರದೊಂದಿಗೆ ನಾಗರಿಕ ಹೊಣೆಗಾರಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಭವಿಷ್ಯ ಶಾಲೆಯಲ್ಲಿ ಸುರಕ್ಷಿತವಾಗಲಿದೆ. ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಲು ಶಾಲೆ ಸದಾ ಸಿದ್ಧವಾಗಿವೆ. ಮರಳಿ ಶಾಲೆಗೆ ಬರುವ ಮೂಲಕ ಕಲಿತು ಬೆಳೆಯಬೇಕು ಎಂದು ತಿಳಿಸಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿಮ್ಮ ಮಕ್ಕಳ ಒಂದು ಹೆಜ್ಜೆ ಶಾಲೆ ಕಡೆ ಯಾದಲ್ಲಿ ನೂರು ಹೆಜ್ಜೆ ಯಶಸ್ಸಿನ ಕಡೆಗೆ ಸಾಗಿದಂತೆ . ಇದನ್ನರಿತು ಪಾಲಕರೆಲ್ಲರೂ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಒದಗಿಸಬೇಕು. ಮಕ್ಕಳ ಕಲಿಕೆಯ ಕೊರತೆ ಭವಿಷ್ಯಕ್ಕೆ ಕುತ್ತು ತರಲಿದೆ. ಇದನ್ನರಿತು ಎಲ್ಲರೂ ಸುಶಿಕ್ಷಿತರಾಗೋಣ ಎಂದು ಶಾಸಕ ಎಸ್.ವಿ.ಸಂಕನೂರ ನುಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರುಡಿ ಮಾತನಾಡಿ ಗುಣಮಟ್ಟದ ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಕರೆತರಲು ಜಿಲ್ಲೆಯಾದ್ಯಂತ ಭವ್ಯ ಭವಿಷ್ಯದ ನಾಳೆಗೆ ಬನ್ನಿ ಬನ್ನಿ ಶಾಲೆಗೆ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ.ಪಾಟೀಲ ಅವರ ನೇತೃತ್ವದಲ್ಲಿ ವಿವಿಧ ಇಲಾಖೆ ಸಂಘ ಸಂಸ್ಥೆಗಳೊಂದಿಗೆ ಗದಗ ಶಹರ ವಲಯದಲ್ಲಿ ಜಾಗೃತಿ ಆಂದೋಲನ ಮಾಡುವ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಪ್ರತಿ ಮಗುವಿನ ಭವಿಷ್ಯವು ದೇಶಕ್ಕೆ ಅತ್ಯಂತ ಪ್ರಮುಖವಾದುದು. ಇದನ್ನೆಲ್ಲರೂ ಅರಿಯಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವೇದಿಕೆಯಲ್ಲಿ ಹೂಗುಚ್ಛ ನೀಡಿ ಸಚಿವರು, ಶಾಸಕರು, ಗಣ್ಯರು ಸ್ವಾಗತಿಸಿದರು . ಇಲಾಖೆಯಿಂದ ಹೊರತರಲಾದ ಕರಪತ್ರಗಳ ಬಿಡುಗಡೆ ಮಾಡಲಾಯಿತು. ಜೊತೆಗೆ ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಶಾಲಾ ಸಮವಸ್ತ್ರ ವಿತರಣೆ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಗುರಣ್ಣ ಬಳಗಾನೂರ, ಎಸ್.ಎನ್.ಬಳಗಾನೂರ, ಬಸವರಾಜ ಧಾರವಾಡ, ಶಿವಕುಮಾರ ಕುರಿ, ಆಂಜನೇಯ ಕಟಗಿ ಸೇರಿದಂತೆ ಸರ್ಕಾರಿ ಪ್ರೌಢಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 