ಬಳ್ಳಾರಿಯಲ್ಲಿ ಕೊರೊನಾಗೆ ಇಂದು ಮತ್ತೆ ಐದು ಮಂದಿ ಬಲಿ: ವೈರಲ್​ ವಿಡಿಯೋ ತನಿಖೆಗೆ ಡಿಸಿ ಆದೇಶ

ಬಳ್ಳಾರಿ ಜೂ 30: ಜಿಲ್ಲೆಯಲ್ಲಿ ಇಂದು ಒಂದೇ ದಿನ ಮಹಾಮಾರಿ ಕೊರೊನಾ ಸೋಂಕಿಗೆ ಐದು ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ತಾಲೂಕಿನ ಕೋಳೂರು ಗ್ರಾಮದ 31 ವರ್ಷದ ಮಹಿಳೆ, ಹೊಸಪೇಟೆ ನಗರದ ಎನ್​​ಸಿ ಕಾಲೋನಿಯ 63 ವರ್ಷದ ಪುರುಷ, ಬಳ್ಳಾರಿ ಸಾಲಾಗೊಂಡ ಪ್ರದೇಶದ 55 ವರ್ಷದ ಮಹಿಳೆ, ಸಂಡೂರು ನಗರದ ಕೆಹೆಚ್​ಬಿ ಕಾಲೊನಿಯ 58 ವರ್ಷದ ಮಹಿಳೆ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಎಸ್​.ಎಸ್​.ನಕುಲ್ ಮಾಹಿತಿ ನೀಡಿದ್ದಾರೆ.

ತೀವ್ರ ಉಸಿರಾಟದ ತೊಂದರೆ, ಜ್ವರ, ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದ ಈ ಐದು ಮಂದಿಯನ್ನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಎಸ್​ಒಪಿ ಪ್ರಕಾರ ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವೈರಲ್ ವಿಡಿಯೋ ಬಗ್ಗೆ ತನಿಖೆಗೆ ಡಿಸಿ ಆದೇಶ:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಜಿಲ್ಲೆಯದ್ದು ಎನ್ನಲಾಗಿರುವ ಕೊರೊನಾ ಸೋಂಕಿತರ ಶವ ಸಂಸ್ಕಾರ ವಿಡಿಯೋ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಿನ್ನೆ ಒಂದೇ ದಿನ 9 ಮಂದಿ ಕೊರೊನಾದಿಂದ ಮೃತಪಟ್ಟಿದ್ದರು. ಇವರ ಶವ ಸಂಸ್ಕಾರದ ವೇಳೆ ಆರೋಗ್ಯ ಸಿಬ್ಬಂದಿ ಮೃತದೇಹಗಳನ್ನು ಕನಿಷ್ಠ ಗೌರವ ಇಲ್ಲದೆ ಗುಂಡಿಗೆ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಈ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.