‘ಆರೋಗ್ಯ ವರ್ಧಕ ಎತ್ತಿನ ಗಾಣದೆಣ್ಣೆ ಬಳಸಿ’ ಎತ್ತಿನ ಗಾಣದ ಎಣ್ಣೆ ಉತ್ಪಾದನೆಗೆ ಬಿಜೆಪಿ ರೈತ ಮೋರ್ಚಾದಿಂದ ಗಾಣಿಗ ಸಮಾಜದ ರೈತರ ಸಭೆ
ಹುಬ್ಬಳ್ಳಿ 30 : ಎತ್ತಿನ ಗಾಣದಲ್ಲಿ ಉತ್ಪಾದನೆ ಮಾಡುವ ಶೇಂಗಾ ಮತ್ತು ಕುಸುಬೆ ಎಣ್ಣೆ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದ್ದು, ನಿತ್ಯದ ಅಡಿಗೆಗೆ ಎಲ್ಲರೂ ಆರೋಗ್ಯ ವರ್ಧಕ ಎತ್ತಿನ ಗಾಣದ ಎಣ್ಣೆ ಬಳಸಬೇಕೆಂದು ಬಿಜೆಪಿ ರೈತ ಮೋರ್ಚಾ ಬೆಂಗಳೂರು ದಕ್ಷಿಣ ಕಾರ್ಯದರ್ಶಿ ವಿದ್ಯಾ ವ್ಹಿ. ಎಂ. ಕರೆ ನೀಡಿದರು.ಅವರು ನಗರದ ಬಿಜೆಪಿ ಕಚೇರಿಯಲ್ಲಿ ಎತ್ತಿನ ಗಾಣದ ಅಡಿಗೆ ಎಣ್ಣೆ ಉತ್ಪಾದನೆಗೆ ಪೂರಕವಾಗಿ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಗಾಣಿಗ ಸಮಾಜ ಬಾಂಧವರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಪೂರ್ವಜರ ಆಹಾರ ಪದ್ಧತಿಯಲ್ಲಿ ಎತ್ತಿನ ಗಾಣದ ಎಣ್ಣೆಗೆ ಸ್ಥಾನವಿತ್ತು. ಎತ್ತಿನ ಎಣ್ಣೆ ಗಾಣದ ಮೂಲಕವೇ ಶುದ್ಧ ಅಡಿಗೆ ಎಣ್ಣೆ ಉತ್ಪಾದನೆಗೆ ಬಿಜೆಪಿ ರೈತ ಮೋರ್ಚಾ ಚಿಂತನೆ ನಡೆಸಿದೆ ಎಂದರು.ಗಾಣಗಳ ವಿತರಣೆ : ಎತ್ತಿನ ಗಾಣದೆಣ್ಣೆ ಉತ್ಪಾದನೆಗೆ ಸಂಬಂಧಿಸಿ ಕೇಂದ್ರ ಆಹಾರ ಸಚಿವರಾದ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚಿಸಿದ್ದು, ಹುಬ್ಬಳ್ಳಿಯಲ್ಲಿ ಸಚಿವರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಸಮಾರಂಭದಲ್ಲಿ ರೈತ ಬಾಂಧವರಿಗೆ ಎತ್ತಿನ ಗಾಣಗಳ ವಿತರಣೆ ಮಾಡಿ, ಹೆಚ್ಚೆಚ್ಚು ಎತ್ತಿನ ಗಾಣದೆಣ್ಣೆ ಉತ್ಪಾದನೆಗೆ ಪ್ರೋತ್ಸಾಹಿಸಲಾಗುವುದು ಎಂದೂ ವಿದ್ಯಾ ಹೇಳಿದರು.
ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿಮೌಳಿ ಕುಲಕರ್ಣಿ ಮಾತನಾಡಿ, ಅಡಿಗೆ ಎಣ್ಣೆ ಉತ್ಪಾದನೆಯನ್ನೇ ತಮ್ಮ ಕುಲಕಸುಬು ಹೊಂದಿರುವ ಧಾರವಾಡ ಜಿಲ್ಲೆಯ ಗಾಣಿಗ ಸಮಾಜ ಬಾಂಧವರಿಗೆ ಹೊಸ ವಿನ್ಯಾಸದ ಎತ್ತಿನ ಗಾಣಗಳನ್ನು ಒದಗಿಸಿ ಶುದ್ಧ ಶೇಂಗಾ ಮತ್ತು ಕುಸುಬೆ ಎಣ್ಣೆ ಉತ್ಪಾದನೆಗೆ ಚಾಲನೆ ನೀಡಲು ಚಿಂತಿಸಲಾಗಿದೆ. ಎತ್ತಿನ ಗಾಣದಲ್ಲಿ ಲಭಿಸುವ ಹಿಂಡಿಯನ್ನು ಎಮ್ಮೆ-ಆಕಳುಗಳಿಗೆ ಒದಗಿಸಿ ಅಧಿಕ ಹಾಲು ಉತ್ಪಾದನೆ ಮಾಡಬಹುದಾಗಿದೆ. ಇದು ರೈತರಿಗೆ ಲಾಭದಾಯಕ ವೃತ್ತಿಯೂ ಆಗಲಿದೆ ಎಂದರು.
ಬಿಜೆಪಿ ರೈತ ಮೋರ್ಚಾ ಧಾರವಾಡ ಜಿಲ್ಲಾಧ್ಯಕ್ಷ ಲಿಂಗಪ್ಪ ಸುತಗಟ್ಟಿ, ಮಂಡಳ ಅಧ್ಯಕ್ಷ ಕಲಗಟ್ಟಿ ಸೇರಿದಂತೆ ಬಿಜೆಪಿ ರೈತ ಮೋರ್ಚಾದ ವಿವಿಧ ಪದಾಧಿಕಾರಿಗಳು ಹಾಗೂ ಗಾಣಿಗ ಸಮಾಜದ ರೈತರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.