ನಕಲಿ ಚಿನ್ನ ಮಾರಾಟ ಯತ್ನ: ಇಬ್ಬರು ನ್ಯಾಯಾಂಗ ವಶಕ್ಕೆ

ಲೋಕದರ್ಶನ ವರದಿ

ಕಾರವಾರ 30: ನಕಲಿ ಚಿನ್ನವನ್ನು ಅಸಲಿ ಎಂದು ವಂಚಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಪ್ಪ, ಮಗನನ್ನು ಕಾರವಾರ ನಗರಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಆರೋಪಿಗಳಿಂದ ಸುಮಾರು ಎರಡು ಕೆ.ಜಿ.ಗಳಷ್ಟು ನಕಲಿ ಬಂಗಾರವನ್ನು ಜಪ್ತಿ ಮಾಡಲಾಗಿದೆ. ಶನಿವಾರ ಇವರನ್ನು ವಶಕ್ಕೆ ಪಡೆದು  ವಿಚಾರಣೆ ಮುಂದುವರಿಸಿ, ಹೆಚ್ಚಿನ ಮಾಹಿತಿ ಕಲೆಹಾಕಿದ ನಂತರ ಆರೋಪಿತರನ್ನು ನ್ಯಾಯಾಧೀಶರ ಎದುರು ರವಿವಾರ  ಹಾಜರು ಪಡಿಸಲಾಗಿದೆ. ಆರೋಪಿಗಳಿಬ್ಬರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. 

ಹರಿಲಾಲ್ ಕನ್ನಯ್ಯಲಾಲ್  (62) ಹಾಗೂ ಪನ್ನಾಲಾಲ್.ಎಚ್. (36) ಎಂಬುವವರು ಬಂಧಿತ ಆರೋಪಿಗಳಾಗಿದ್ದು, ಇವರು ಗುಜರಾತ್ ರಾಜ್ಯದ ಗಾಂಧಿ ನಗರದ ಕೋಡಿಯಾರ್ ಮಾ ಟೆಂಪಲ್ ರಸ್ತೆಯ ನಿವಾಸಿಗಳಾಗಿದ್ದಾರೆ. 

ತಾವು ಕೃಷಿಕರಾಗಿದ್ದು, ಜಮೀನಿನಲ್ಲಿ ಹೊಂಡ ತೆಗೆಯುವಾಗ ನಿಧಿ ಸಿಕ್ಕಿತ್ತು. ಈಗ ಹಣದ ಅವಶ್ಯಕತೆಯಿದ್ದು, ಅದನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದಾಗಿ ಬಂಗಾರದ ವ್ಯಾಪಾರಿಗಳನ್ನು ಹಾಗೂ ಗ್ರಾಹಕರನ್ನು ನಂಬಿಸುತ್ತಿದ್ದರು. ಆರಂಭದಲ್ಲಿ ಶುದ್ಧ ಚಿನ್ನವನ್ನೇ ತೋರಿಸಿ, ನಂಬಿಕೆ ಬರುವಂತೆ ಮಾಡಿ, ಬಳಿಕ ನಕಲಿ ಬಂಗಾರವನ್ನು  ನೀಡುತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಕಾರವಾರದ ಗ್ರೀನ್ಸ್ಟ್ರೀಟ್ ನಿವಾಸಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪಿಎಸ್ಐ ನವೀನ್ ನಾಯ್ಕ ಅವರ ನೇತೃತ್ವದಲ್ಲಿ  ಕಾಯರ್ಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಬಂಧಿಸುವಲ್ಲಿ ಯಶಸ್ವಿಯಾದರು. ಇದೀಗ ಆರೋಪಿಗಳು 15 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಆರೋಪಿಗಳ ಬಳಿ ಮಾಹಿತಿ ಕಲೆಹಾಕಿದ್ದು, ಜಾಲದಲ್ಲಿ ಇನ್ನೆಷ್ಟು ಜನರಿದ್ದಾರೆ ಮತ್ತು ಎಷ್ಟು ವಂಚನೆ ಮಾಡಿದ್ದಾರೆ ಎಂದು ತನಿಖೆ ಮುಂದುವರಿಯಲಿದೆ.