ಹೊಸದಿಲ್ಲಿ, ಜು. 26 ಸುನಿಲ್ ಛೆಟ್ರಿ ಸಾರಥ್ಯದ ಭಾರತ ಫುಟ್ಬಾಲ್ ತಂಡ, ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೀಡಿದ ಕಳಾಹೀನ ಪ್ರದರ್ಶನದ ಪರಿಣಾಮ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟ (ಫಿಫಾ) ಬಿಡುಗಡೆ ಮಾಡಿರುವ ನೂತನ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನ ಕಳೆದುಕೊಂಡು 103ನೇ ಸ್ಥಾನಕ್ಕೆ ಇಳಿದಿದೆ.
ಇದೇ ತಿಂಗಳ ಆರಂಭದಲ್ಲಿ ಅಹಮದಾಬಾದ್ನಲ್ಲಿ ನಡೆದ ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ ಭಾರತ ತಂಡ, ಎರಡು ಸೋಲು ಮತ್ತೊಂದು ಪಂದ್ಯದಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತ್ತು.
ಭಾರತ ತಂಡ ಟೂರ್ನಿಯಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ತಜಕಿಸ್ತಾನ ವಿರುದ್ಧ 2-4 ಗೋಲ್ಗಳ ಸೋಲನುಭವಿಸಿ, ಬಳಿಕ ಉತ್ತರ ಕೊರಿಯಾ ವಿರುದ್ಧ 2-5 ಗೋಲ್ಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿತ್ತು.
ತದನಂತರ ನಡೆದ ಮೂರನೇ ಲೀಗ್ ಪಂದ್ಯದಲ್ಲಿ ಗೆಲ್ಲುವ ಉತ್ತಮ ಅವಕಾಶವನ್ನು ಕೈಚೆಲ್ಲಿ ಸಿರಿಯಾ ವಿರುದ್ಧ 1-1 ಗೋಲ್ಗಳ ಸಮಬಲಕ್ಕೆ ತೃಪ್ತಿಪಟ್ಟಿತ್ತು. ಸುನಿಲ್ ಛೆಟ್ರಿ ಪಡೆ ಸದ್ಯಕ್ಕೆ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 1214 ಅಂಕಗಳನ್ನು ಹೊಂದಿದೆ. ಕಳೆದ ಬಾರಿ ಪ್ರಕಟಿಸಿದ್ದ ಶ್ರೇಯಾಂಕ ಪಟ್ಟಿಗಿಂತಲೂ ಭಾರತ ತಂಡ ಈ ಬಾರಿ ಒಟ್ಟು 5 ಅಂಕಗಳನ್ನು ಕಳೆದುಕೊಂಡಿದೆ.
ಇದರೊಂದಿಗೆ ಏಷ್ಯಾ ಭಾಗದ ಶ್ರೇಯಾಂಕದಲ್ಲಿ ಭಾರತ ತಂಡ 18ನೇ ಸ್ಥಾನದಲ್ಲಿದ್ದು, ವಿಶ್ವ ಶ್ರೇಯಾಂಕದಲ್ಲಿ 23ನೇ ಸ್ಥಾನದಲ್ಲಿರುವ ಇರಾನ್, ಏಷ್ಯಾ ಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಜಪಾನ್ (33), ಕೊರಿಯಾ (37), ಆಸ್ಟ್ರೇಲಿಯಾ (46) ಮತ್ತು ಕತಾರ್ (62) ನಂತರದ ಸ್ಥಾನಗಳಲ್ಲಿವೆ. ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಬೆಲ್ಜಿಯಂ ತಂಡ ಅಗ್ರ ಸ್ಥಾನದಲ್ಲಿದ್ದರೆ, ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಉರುಗ್ವೆ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳನ್ನು ಅಲಂಕರಿಸಿವೆ