ಬೆಂಬಲ ಬೆಲೆ ಯೋಜನೆಯಡಿ ಎಫ್ ಎ ಕ್ಯೂ ಗುಣಮಟ್ಟದ ಕಡಲೆ ಹುಟ್ಟುವಳಿ ಖರೀದಿಗೆ ಬೆಂಬಲ ಬೆಲೆ ನಿಗದಿ

ಬೆಂಬಲ ಬೆಲೆ ಯೋಜನೆಯಡಿ ಎಫ್ ಎ ಕ್ಯೂ ಗುಣಮಟ್ಟದ ಕಡಲೆ  ಹುಟ್ಟುವಳಿ ಖರೀದಿಗೆ ಬೆಂಬಲ ಬೆಲೆ ನಿಗದಿ  FAQ Support price for purchase of quality chickpea crop under support price scheme


  ಗದಗ  31:  2025-26 ನೇ ಸಾಲಿನ  ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಹುಟ್ಟುವಳಿಯನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು   ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಶುಕ್ರವಾರ  2025-26 ನೇ ಸಾಲಿನ  ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಹುಟ್ಟುವಳಿಯನ್ನು ಕನಿಷ್ಟ ಬೆಂಬಲ ಬಲೆ ಯೋಜನೆಯಡಿಯಲ್ಲಿ ಖರೀದಿಸುವ ಕುರಿತು ಜರುಗಿದ ಟಾಸ್ಕ್‌ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲೆಯ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್ ನಂತೆ ಗರಿಷ್ಟ 40 ಕ್ವಿಂಟಲ್ ಎಫ್‌.ಎ.ಕ್ಯೂ ಗುಣಮಟ್ಟದ ಕಡಲೆ ಕಾಳು  ಖರೀದಿಸಲು ಹಾಗೂ  ಕಡಲೆ ಕಾಳು ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆ ಕಾಳು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗವಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಖರೀದಿ ಪ್ರಕ್ರಿಯೆಯಲ್ಲಿ ಎಫ್‌.ಎ.ಕ್ಯೂ ಗುಣಮಟ್ಟದ ಪರೀಶೀಲನೆಗೆ  ಅಧಿಕಾರಿ/ ಸಿಬ್ಬಂದಿಗಳನ್ನು ಬಳಸಿಕೊಂಡು ಅಂತಹವರಿಗೆ ಸೂಕ್ತ ಗ್ರೇಡಿಂಗ್ ತರಬೇತಿ ನೀಡಲು ಖರೀದಿ ಸಂಸ್ಥೆಗಳು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.      

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಧಾ ಬಂಡಿ ಮಾತನಾಡಿ ಗದಗ ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಹುಟ್ಟುವಳಿಯನ್ನು ಬೆಳೆದಿದ್ದು, ಪ್ರಸ್ತುತ ಗದಗ, ನರಗುಂದ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ, ಹಾಗೂ ಮುಂಡರಗಿ ಮಾರುಕಟ್ಟೆ ಸಮಿತಿಗಳಲ್ಲಿ ಕಡಲೆ ಹುಟ್ಟುವಳಿಯ ಆವಕ ಆಗುತ್ತಿದೆ.   ಸರ್ಕಾರವು ಕಡಲೆ ಹುಟ್ಟುವಳಿಗೆ  ಪ್ರತಿ ಕ್ವಿಂಟಲ್ ಗೆ 5875 ರೂ.ಗಳಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಯನ್ವಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ( ಮಾರ್ಕಫೆಡ್ ) ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ. ರೈತರು ನೋಂದಣಿ ಕಾರ್ಯದ ಕಾಲಾವಧಿಯನ್ನು ಆದೇಶ ಹೊರಡಿಸಿದ ದಿನಾಂಕದಿಂದ 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90  ದಿನಗಳವರೆಗೆ ನಿಗದಿಪಡಿಸಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸಭೆಗೆ ವಿವರಿಸಿದರು.  ಜಿಲ್ಲೆಯ 70  ಕಡೆಗಳಲ್ಲಿ   ಕಡಲೆ ಕಾಳು ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ  ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ, ಆಹಾರ, ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರಮೇಶ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು, ಮಾರ್ಕೆಟಿಂಗ್ ಫೆಡರೇಶನ್ ಶಾಕಾ ವ್ಯವಸ್ಥಾಪಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.