ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಬೇಕು: ಅಪರ ಜಿಲ್ಲಾಧಿಕಾರಿ

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಬೇಕು: ಅಪರ ಜಿಲ್ಲಾಧಿಕಾರಿ Everyone should understand the importance of consumer rights: Additional District Magistrate

ಕಾರವಾರ 12: ಉತ್ಪಾದಕರು ಕೇವಲ ಲಾಭ ಗಳಿಸುವ ಉದ್ದೇಶದಿಂದ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಗ್ರಾಹಕರು ಸರಕು, ಸೇವೆಗಳನ್ನು ಪಡೆಯುವಾಗ  ಹಿಂದಿಗಿಂತಲೂ ಹೆಚ್ಚು ಜಾಗೃತರಾಗಬೇಕು. ಗ್ರಾಹಕರ ಹಕ್ಕುಗಳ ಮಹತ್ವ, ಕರ್ತವ್ಯವನ್ನು ತಿಳಿದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು. 

ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಕಾರವಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಇಲಾಖೆ, ಕರ್ನಾಟಕ ಆಹಾರ ನಿಗಮ, ಹಾಗೂ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ, ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಆಧುನಿಕ ಕಾಲದಲ್ಲಿ ಯುವ ಜನತೆ ಮನೆಯಲ್ಲಿ ಕುಳಿತು ಆನ್‌ಲೈನ್ ಸೇವೆ ಪಡೆಯುವುದು ಹೆಚ್ಚಾಗಿದ್ದು, ಇದರಲ್ಲೇ ಹೆಚ್ಚಿನ ಮೋಸಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ವಸ್ತು ಖರೀಸುವಾಗ ಅದರ ಗುಣಮಟ್ಟ, ಬೆಲೆ ಕುರಿತು ಜಾಗೃತಿ ವಹಿಸಿ ಪರೀಶೀಲಿಸಿದ ನಂತರವೇ ಖರೀದಿಸಬೇಕು. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡಬಾರದು.  ಯುವ ಜನತೆಗೆ ಸ್ವಾಮಿ ವಿವೇಕಾನಂದರ , ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದ್ದಿರಿ ಎಂಬ ಕರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ದೊರೆಯಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ ಮಾತನಾಡಿ, ಇಡೀ ವಿಶ್ವವೇ ಒಂದು ಮಾರುಕಟ್ಟೆ , ಮನುಷ್ಯ ಒಬ್ಬ ಗ್ರಾಹಕ. ಮನುಷ್ಯನಿಗೆ ಉಚಿತವಾಗಿ ಸಿಗುವ ನೀರು, ಗಾಳಿ, ಬೆಳಕು, ಪ್ರಕೃತಿಯಲ್ಲಿ ಯಾವುದೇ ಮೋಸವಿಲ್ಲ ಆದರೆ ಇದನ್ನು ಕಲುಷಿತಗೊಳಿಸಲಾಗುತ್ತಿದೆ. ಹಣ ಕೊಟ್ಟು ಖರೀದಿಸುವ ವಸ್ತುಗಳಲ್ಲಿ ಮೋಸ ಹೋಗಲಾಗುತ್ತದೆ. ಗ್ರಾಹಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಅವರ ಹಕ್ಕುಗಳನ್ನು ರಕ್ಷಣೆ ಮಾಡಬಹುದು. ಇತ್ತಿಚಿನ ದಿನಗಳಲ್ಲಿ ವ್ಯಾಪಾರಸ್ಥರು ಗ್ರಾಹಕರ ಆರೋಗ್ಯದ ದೃಷ್ಠಿಯನ್ನು ನೋಡದೇ ನಕಲಿ ವಸ್ತುಗಳನ್ನು ಸೃಷ್ಠಿ ಲಾಭಾಂಶಗಳಿಗಾಗಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಹಾಗೂ ಆಕರ್ಷಕ ಜಾಹಿರಾತುಗಳನ್ನು ನಂಬಿ, ವಸ್ತುಗಳನ್ನು ಖರೀದಿಸದೇ ಅದರ ಗುಣಮಟ್ಟವನ್ನು ಅರಿತುಕೊಂಡು ಖರೀದಿಸಬೇಕು. ಗ್ರಾಹಕರ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಅರಿವು ಇದ್ದಲ್ಲಿ ಗ್ರಾಹಕರಿಗೆ ಆಗುವ ಅನ್ಯಾಯವನ್ನು ತಡೆಯಬಹುದು ಎಂದರು. 

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಾರುತಿ ವಡ್ಡರ ಮಾತನಾಡಿ, ಗ್ರಾಹಕರ ಹಿತ ಕಾಯುವ ಉದ್ದೇಶದಿಂದ ಭಾರತದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಮಾರ್ಚ 15 ರಂದು ಹಾಗೂ ಡಿ.24 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತಾಯಿಯ ಗರ್ಭದಿಂದ ಮರಣದವರೆಗೂ ಪ್ರತಿಯೊಬ್ಬರು ಗ್ರಾಹಕರು. ತಾವು ಮೋಸ ಹೋಗಿರುವುದು ತಿಳಿದ ತಕ್ಷಣ ಗ್ರಾಹಕರ ವ್ಯಾಜ್ಯಗಳಿಗೆ ಪರಿಹಾರ ಆಯೋಗಕ್ಕೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿ 3 ತಿಂಗಳೊಳಗೆ ಪರಿಹಾರ ಕಂಡುಕೊಳ್ಳಬಹುದು. ಗ್ರಾಹಕರ ಹಿತ ಕಾಯುವದಕ್ಕಾಗಿಯೇ ಆಯೋಗವು ಕಾರ್ಯನಿರ್ವಹಿಸುತ್ತದೆ ಎಂದರು. 

ಕಾರವಾರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹೇಮಲತಾ ಕೆ ಗ್ರಾಹಕರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು-ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಸುಮನ್ ಗೋವಿಂದ ಸಾವಂತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ನೈನಾ ಅಶೋಕ ಕಾಮಟೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಭಾಗವತ್, ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಡಿ ರೇವಣ್ಕರ್ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿವಾಜಿ ಶಿಕ್ಷಣ ಮಹಾ ವಿದ್ಯಾಲಯದ ಎನ್‌.ಎಸ್‌.ಎಸ್ ಕಾರ್ಯಕ್ರಮದ ಅಧಿಕಾರಿ ನವೀನ್ ದೇವರಭಾವಿ ನಿರೂಪಿಸಿ, ವಂದಿಸಿದರು.