ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಲಿ: ಜಿ.ಎಸ್‌. ಪಾಟೀಲ

ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಲಿ: ಜಿ.ಎಸ್‌. ಪಾಟೀಲ  Everyone should join hands for the development of Veereshwara Punyashrama: G.S. Patil

ಲೋಕದರ್ಶನ ವರದಿ 

ಗದಗ, ಸೆ.29: ನಗರದ ವೀರೇಶ್ವರ ಪುಣ್ಯಾಶ್ರಮ ಹಾಗೂ ಅದರ ಅಂಗಸಂಸ್ಥೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಂತಹ ಸಹಕಾರದಿಂದ ದೊರೆಯುವ ಗೌರವ ಮತ್ತು ಸನ್ಮಾನವೇ ನನಗೆ ತೃಪ್ತಿ ನೀಡುತ್ತದೆ ಎಂದು ವಿಧಾನಸಭೆಯ ನೂತನ ಸಭಾಧ್ಯಕ್ಷ ಹಾಗೂ ಡಾ. ಪಂ. ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಜಿ.ಎಸ್‌. ಪಾಟೀಲ ಹೇಳಿದರು.  

ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ ಡಾ. ಪಂ. ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಮಿತಿ, ಗದಗ ಹಾಗೂ ಅಂಗಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  

ಮಾಜಿ ಸಚಿವ ಹಾಗೂ ಶಾಸಕ ಡಾ. ಎಚ್‌.ಕೆ. ಪಾಟೀಲ ಮಾತನಾಡಿ, ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮವು ಅಂಧ ಹಾಗೂ ಅನಾಥರ ಬದುಕಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಸಂಗೀತ ಶಿಕ್ಷಣದ ಮೂಲಕ ಅವರನ್ನು ಸ್ವಾಭಿಮಾನಿಗಳಾಗಿ ರೂಪಿಸುತ್ತಿದೆ. ಜೀವನಕ್ಕೆ ಅಗತ್ಯವಾದ ಕೌಶಲ್ಯ ಕಲಿಸುವ ಸಂಸ್ಥೆಗಳಲ್ಲಿ ವೀರೇಶ್ವರ ಪುಣ್ಯಾಶ್ರಮ ಪ್ರಮುಖವಾಗಿದೆ. ಮಾನವ ಹಕ್ಕುಗಳನ್ನು ರಕ್ಷಿಸಿ ಬೆಳೆಸುವ ಕಾರ್ಯವನ್ನು ಆಶ್ರಮ ನಿರಂತರವಾಗಿ ಮಾಡುತ್ತಿದೆ ಎಂದರು.  

ಡಾ. ಪಿಜಿಎಎಸ್ ಸಮಿತಿಯ ಉಪಾಧ್ಯಕ್ಷ ಡಾ. ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ ಮಾತನಾಡಿ, ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಮಿತಿ ಸ್ಥಾಪನೆಗೆ ಚನ್ನವೀರಶಾಸ್ತ್ರಿಗಳು, ಎಸ್‌.ಎನ್‌. ಗೌಡ, ಗುರುಮಠ ಸೇರಿದಂತೆ ಹಲವರು ಕಾರಣರಾಗಿದ್ದಾರೆ. ಸಂಸ್ಥೆಯ ಅಭಿವೃದ್ಧಿಗೆ ಜಿ.ಎಸ್‌. ಪಾಟೀಲರು ಕಾರ್ಯದರ್ಶಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.  

ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ಸಹಕಾರದರ್ಶಿ ಎಸ್‌.ಎಂ. ಗೌಡ, ಚೇಂಬರ್ ಆಫ್ ಕಾಮರ್ಸ್‌ ಜಿಲ್ಲಾ ಅಧ್ಯಕ್ಷ ರಾಜಣ್ಣ ಗುಡಿಮನಿ, ಕುತರ್ಕೋಟಿಯ ಅಪ್ಪಣ್ಣ ಇನಾಮತಿ ಸೇರಿದಂತೆ ವಿವಿಧ ಗಣ್ಯರು ಮಾತನಾಡಿದರು.  

ವೇದಿಕೆಯಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಐ.ಎಸ್‌. ಪಾಟೀಲ, ಡಾ. ಪಿಜಿಎಎಸ್ ಸಮಿತಿಯ ನಿರ್ದೇಶಕ ಶಿವರುದ್ರ​‍್ಪ ಇಟಗಿ, ವಿ.ಬಿ. ಸೋಮನಕಟ್ಟಿ, ಗಂಗಾ ಚಕ್ರಣ್ಣವರ, ಅಡವೇಂದ್ರ ಶ್ರೀಮಠದ ಪೂಜ್ಯಶ್ರೀ ಮಹೇಶ್ವರ ಸ್ವಾಮೀಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ಬಿ.ಬಿ. ಅಸೂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಡಾ. ಪಂಚಾಕ್ಷರ ಗವಾಯಿಗಳ ಅಂಧರ ವಸತಿಯುತ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಪಂ. ಪಂಚಾಕ್ಷರ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪಂ. ಶಿವಲಿಂಗಯ್ಯ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.