ಶಾಲಾ ಅವಧಿಯಲ್ಲಿ ಮಕ್ಕಳು ಶಾಲೆಯಲ್ಲಿರುವಂತೆ ನೋಡಿಕೊಳ್ಳಿ: ನ್ಯಾ. ಮಹಾಂತೇಶ ದರಗದ್
ಕೊಪ್ಪಳ 22: ವಿವಿಧ ಕಾಯ್ದೆಯಡಿಯಲ್ಲಿ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲಾ ಅವಧಿಯಲ್ಲಿ ಶಾಲೆಯಲ್ಲಿರುವುದು ಕಡ್ಡಾಯವಾಗಿದ್ದು, ಈ ಅವಧಿಯಲ್ಲಿ ಮಕ್ಕಳು ಶಾಲೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ್ ಹೇಳಿದರು.
ಅವರು ಬುಧವಾರ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ “ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ 2023ರ ಹಾಗೂ ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ” ಎಂಬ ವಿಷಯದ ಕುರಿತು ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ವೇಳೆ ಮಕ್ಕಳು ಶಾಲೆಯಿಂದ ಹೊರಗುಳಿದಲ್ಲಿ, ದುಶ್ಚಟಗಳಿಗೆ ಬಲಿಯಾಗಬಹುದು. ಮಾದಕ ವ್ಯಸನಿಗಳಾಗಬಹುದು, ಕಾರ್ಮಿಕರಾಗಿ ದುಡಿಯುತ್ತಾ ಕಿರುಕುಳ, ಹಲ್ಲೆ ಅಥವಾ ದೌರ್ಜನ್ಯಗಳಿಗೆ ಸಿಲುಕಬಹುದಾಗಿದೆ. ಅಲ್ಲದೇ ಬಾಲ್ಯವಿವಾಹಕ್ಕೆ ತುತ್ತಾಗಿ ಪ್ರತಿ ದಿನವು ಲೈಂಗಿಕ ದೌರ್ಜನ್ಯಗಳಿಗೆ, ಬಾಲ ಗರ್ಭಿಣಿಯರಾಗಿ ಸಾವಿಗೆ ತುತ್ತಾಗಬಹುದಾಗಿದೆ ಅಥವಾ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ. ಆದ್ದರಿಂದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಲ್ಲಿ ಪಾಲಕರ ಮನವೋಲಿಸಿ ಅಂತಹ ಮಕ್ಕಳನ್ನು ಮರಳಿ ಶಾಲೆಗೆ ಕರೆದುಕೊಂಡು ಬನ್ನಿ. ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗಿ ದುಡಿಯುವುದು, ಬಾಲ್ಯವಿವಾಹಕ್ಕೆ ಒಳಗಾಗಿ ಲೈಂಗಿಕ ಹಲ್ಲೆ, ಕಿರುಕುಳವನ್ನು ಅನುಭವಿಸುವುದನ್ನು ಹಾಗೂ ಬಾಲ ಗರ್ಭಿಣಿಯರಾಗುವುದನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಹಿಸುವುದಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ-1098 ಅಥವಾ 112ಗೆ ಕರೆ ಮಾಡಿ ಮಾಹಿತಿಯನ್ನು ನೀಡಿಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಶಂಕ್ರಯ್ಯ ಅವರು ಮಾತನಾಡಿ, ರಾಜ್ಯದ ದೃಷ್ಠಿಕೋನ ರಾಜ್ಯದಲ್ಲಿನ ಪ್ರತಿ ಮಗುವು ಸುರಕ್ಷಿತ, ರಕ್ಷಣಾತ್ಮಕ ಮತ್ತು ಸಶಕ್ತ ಪರಿಸರದಲ್ಲಿ ಬೆಳೆಯುವುದರೊಂದಿಗೆ, ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಮಗುವು ತನ್ನ ಸಾಮರ್ಥ್ಯವನ್ನು ತಲುಪಲು ಅವಕಾಶಗಳನ್ನು ಒದಗಿಸುತ್ತದೆ. ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಮತ್ತು ಆನಂದಿಸಲು ಅನುಕೂಲಕರವಾದ ಪರಿಸರವನ್ನು ನಿರ್ಮಿಸಲು ರಾಜ್ಯದಲ್ಲಿನ ಎಲ್ಲಾ ಭಾಗೀದಾರರು ಅಂದರೆ, ಪೋಷಕರು, ಆರೈಕೆ ಸೇವೆಗಳನ್ನು ನೀಡುವವರು ಮತ್ತು ಸಮುದಾಯ ಒಟ್ಟುಗೂಡಿ ಕೆಲಸ ಮಾಡುವುದರೊಂದಿಗೆ ಮಕ್ಕಳ ಕುರಿತಾದ ತಾರತಮ್ಯಗಳನ್ನು ನಿವಾರಿಸುವ ಹಾಗೂ ಮಕ್ಕಳ ಭಾಗವಹಿಸುವಿಕೆ ಸಂಭಾಷಣೆ ಮತ್ತು ಅಭಿಪ್ರಾಯಗಳನ್ನು ಗೌರವಿಸುವುದರೊಂದಿಗೆ ಮಗುವಿನ ಘನತೆಯನ್ನು ಎತ್ತಿ ಹಿಡಿಯುವುದಾಗಿದೆ ಎಂದರು.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ (ಕೆಎಸ್‌ಸಿಪಿಪಿ)ಯ ಮಕ್ಕಳ ಅಧಿಪತ್ಯದ ತತ್ವವನ್ನಾಧರಿಸಿದ ಮಕ್ಕಳ ರಕ್ಷಣೆಯ ಒಂದು ಸಮಗ್ರ ಭಾಗವಾಗಿದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿರುವ ಘಟನೆಗಳು ವರದಿಯಾಗಿವೆ. ಆದ್ದರಿಂದ ಜಿಲ್ಲೆಯಲ್ಲಿನ ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ “ಮಕ್ಕಳ ಸುರಕ್ಷತಾ ನೀತಿ”ಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಅವರು ಮಾತನಾಡಿ, “ರಾಜ್ಯವು ಯಾವುದೇ ಮಗು, ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆ, ದೌರ್ಜನ್ಯ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಸಿಲುಕಿರುವವರನ್ನು ಅಥವಾ ಒಳಗಾಗಬಹುದಾದವರನ್ನು ರಕ್ಷಿಸಲು ಮುಂಜಾಗ್ರತಾ ಮತ್ತು ಸುಧಾರಣೆಯ ಎರಡು ರೀತಿಯ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಮಕ್ಕಳ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸುವುದರೊಂದಿಗೆ ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಒಳಗೊಂಡಂತೆ ಅವರ ಸುರಕ್ಷತೆಯನ್ನು ಖಚಿತಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಾಲೆಗಳಲ್ಲಿ ಅವಶ್ಯವಿರುವ ಯಾವುದೇ ಮೂಲಭೂತ ಅವಶ್ಯಕತೆಗಳನ್ನು “ಗ್ರಾಮ ಪಂಚಾಯತ್‌ನಲ್ಲಿ ಲಭ್ಯವಿರುವ, ಮಕ್ಕಳ ಆಯ್ಯ-ವ್ಯಯದಲ್ಲಿ ಭರಿಸಲು ಅವಕಾಶವಿದ್ದು ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕಡ್ಡಾಯವಾಗಿ ಒದಗಿಸಿ. ಪ್ರತಿಯೊಂದು ಸಂಸ್ಥೆಯಲ್ಲೂ ಅಧಿಕಾರಿಗಳು, ಸಿಬ್ಬಂದಿಗಳ ಪೊಲೀಸ್ ಪರೀಶೀಲನೆ, ಮಕ್ಕಳ ಬದ್ಧತಾ ಪತ್ರ, ಮಕ್ಕಳ ಸಲಹಾ ಪೆಟ್ಟಿಗೆಗಳನ್ನು, ಸಿಬ್ಬಂದಿಗಳ ಬದ್ಧತಾ ಪತ್ರವನ್ನು ಪಡೆಯುವುದು ಅತ್ಯವಶ್ಯಕವಾಗಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ರವಿಪವಾರ್ ಅವರು ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಓಟರೀಚ್ ವರ್ಕರ್ ಪ್ರತಿಭಾ ಕಾಶಿಮಠ ಅವರು “ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ 2023ರ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಪ್ಪಳ ಮತ್ತು ಅಳವಂಡಿ ವಲಯದ ಮುಖ್ಯೋಪಾಧ್ಯಾಯರುಗಳು ಭಾಗವಹಿಸಿದ್ದರು.