ಮೆಡಿಕಲ್ ಕಾಲೇಜು ನಿರ್ದೇಶಕಿ ,ವೈದ್ಯರ ಜೊತೆ ಶಾಸಕ ಹಾಗೂ ಎಂಎಲ್ಸಿ ತುರ್ತು ಸಭೆ : ಮುಂಜಾಗ್ರತೆಗೆ ಸೂಚನೆ

ಮೆಡಿಕಲ್ ಕಾಲೇಜು ನಿರ್ದೇಶಕಿ ,ವೈದ್ಯರ ಜೊತೆ ಶಾಸಕ ಹಾಗೂ ಎಂಎಲ್ಸಿ ತುರ್ತು ಸಭೆ : ಮುಂಜಾಗ್ರತೆಗೆ  ಸೂಚನೆ Emergency meeting of MLA and MLC with Medical College Director, Doctors: Caution advised

ಮೆಡಿಕಲ್ ಕಾಲೇಜು ನಿರ್ದೇಶಕಿ ,ವೈದ್ಯರ ಜೊತೆ ಶಾಸಕ ಹಾಗೂ ಎಂಎಲ್ಸಿ ತುರ್ತು ಸಭೆ : ಮುಂಜಾಗ್ರತೆಗೆ  ಸೂಚನೆ 

ಕಾರವಾರ 17:  ತೋಳೆ ಮೀನು ಚುಚ್ಚಿ ಸಾವನಪ್ಪಿದ ಮಾಜಾಳಿಯ ಯುವ ಮೀನುಗಾರ ಅಕ್ಷಯ ಮಾಜಾಳಿಕರ ಅವರ ಪ್ರಕರಣವನ್ನು ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ವಿಧಾನ ಪರಿಷತ್ ಸದಸ್ಯ  ಗಣಪತಿ ಉಳ್ವೇಕರ್ ಗಂಭೀರವಾಗಿ ಪರಿಗಣಿಸಿ ,ಸಭೆ ನಡೆಸಿದರು.  ವಿವಿಧ ಹಂತದ ವೈದ್ಯರು ಹಾಗೂ ಶುಶ್ರೂಷಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಸೇವೆಗಳನ್ನು ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ವರ್ಗಗಳ ಜೊತೆಗೆ ಸಭೆ ನಡೆಸಿದ ಶಾಸಕರು  ತುರ್ತು ಸನ್ನಿವೇಶದ ಅವಧಿಯಲ್ಲಿ ಆಸ್ಪತ್ರೆ ಉಪಯೋಗಕ್ಕೆ ಬರುವ ನಿಟ್ಟಿನಲ್ಲಿ ಮೇಲ್ದರ್ಜೆಗೇರಿಸುವ ಬಗ್ಗೆ ಹಾಗೂ ಸೂಪರ್ ಸ್ಪೇಷಾಲಿಟಿ  ಆಸ್ಪತ್ರೆ ನಿರ್ಮಿಸುವ ಬಗ್ಗೆ ಚರ್ಚಿಸಿದರು.‘ಸಾಕಷ್ಟು ಶ್ರಮವಹಿಸಿ ನಾವು ಮೆಡಿಕಲ್ ಕಾಲೇಜು ಮಾಡಿದ್ದೇವೆ. ಹಲವು ಹೋರಾಟದ ನಂತರ ಕಾರವಾರಕ್ಕೆ ಮೆಡಿಕಲ್ ಕಾಲೇಜು ಸಿಕ್ಕಿದೆ. ಆದರೆ, ಇಲ್ಲಿನ ಸೇವೆ ಸರಿಯಾಗಿ ಜನರಿಗೆ ಸಿಗುತ್ತಿಲ್ಲ. ಇಲ್ಲಿನ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅದನ್ನು ಬಗೆಹರಿಸುವುದು ನಮ್ಮ ಗುರಿ  ಎಂದು ಶಾಸಕ ಸತೀಶ್ ಸೈಲ್ ಸಭೆಯಲ್ಲಿ ಹೇಳಿದರು . ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್  ಮಾತನಾಡಿ   ಜನರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕಿದೆ. ಯಾರಿಗೆ ಏನೇ ಸಮಸ್ಯೆ ಇದ್ದರೂ ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ್ದಾರೆ.ಅಕ್ಷಯ ಮಾಜಾಳಿಕರ್ ಅವರಂಥ ಯುವಕರ ಸಾವು ಎಲ್ಲರಿಗೂ ನೋವು ತಂದಿದೆ. ಇಂಥ ದುರ್ಘಟನೆಗಳು  ಮರುಕಳಿಸಬಾರದು. ವಿಷ ಜಂತು ಕಚ್ಚಿದ ತಕ್ಷಣ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಅಗತ್ಯವಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಸಿದ್ಧವಾಗಿರಬೇಕು  ಎಂದು  ಶಾಸಕ ಹಾಗೂ ಎಂಎಲ್ಸಿ  ಕಿಮ್ಸ್‌ ವೈದ್ಯರಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ಸೇವೆಯಲ್ಲಿರುವ ವೈದ್ಯರ ಹೆಸರು ಹಾಗೂ ಹುದ್ದೆಯನ್ನು ಕಡ್ಡಾಯವಾಗಿ ನಾಮಫಲಕದಲ್ಲಿ ಬರೆಯಬೇಕು. ವೈದ್ಯರು ತಕ್ಷಣ ಸಿಗುವಂತೆ ನೋಡಿಕೊಳ್ಳಲು ಅವರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಎಂದು ತಾಕೀತು ಮಾಡಿದರು.ಆರ್ ಟಿ ಒ  ವಿರುದ್ಧ ಆಕ್ಷೇಪ : ಸರ್ಕಾರಿ ಆಸ್ಪತ್ರೆಯಲ್ಲಿರುವ ಆಂಬುಲೆನ್ಸಗೆ ಅಗತ್ಯ ಕಾಗದಪತ್ರ ಒದಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಸಡ್ಡೆ ತೋರಿರುವ ಬಗ್ಗೆ ಈ ಸಭೆಯಲ್ಲಿ ಕಿಮ್ಸ್‌ ನಿರ್ದೇಶಕಿ ಡಾ. ಪೂರ್ಣಿಮಾ ಅವರು ಅಸಮಧಾನವ್ಯಕ್ತಪಡಿಸಿದರು. ಶಾಸಕ ಸತೀಶ್ ಸೈಲ್ ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ ಗರಂ ಆದರು. ಸಾರಿಗೆ ಅಧಿಕಾರಿಗಳನ್ನು ಸಭೆಗೆ ಕರೆಯಿಸಿದ ಶಾಸಕರು ಸಾರ್ವಜನಿಕ ಸೇವೆಗೆ ಆಂಬುಲೆನ್ಸ ಸಿಗುವಂತೆ ಅಗತ್ಯ ದೃಢೀಕರಣ ಒದಗಿಸಿ ಎಂದು ಸೂಚಿಸಿದರು.ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಪ್ರತಿ ಗ್ರಾಮದ ಐದು ಜನ ಮುಖಂಡರನ್ನು ಕರೆದು ಸಭೆ ನಡೆಸಬೇಕು. ಒಂದು ವಾರದಲ್ಲಿ ಈ ಸಭೆ ಆಯೋಜಿಸಿ ಸಮಸ್ಯೆಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಕಿಮ್ಸ್‌ ಆಡಳಿತಾಧಿಕಾರಿಗಳು ಸಭೆಯ ನೇತೃತ್ವವಹಿಸಬೇಕು ಎಂದು ಸತೀಶ್ ಸೈಲ್ ಸೂಚಿಸಿದರು.ಸಭೆಯಲ್ಲಿ ನಗರಸಭೆ ಕಮೀಷನರ್ ಜಗದೀಶ ಹುಲಿಗಜ್ಜಿ, ಅರಣ್ಯ ಇಲಾಖೆಯ ಅಧಿಕಾರಿ  ಆರ್ ಎಫ್‌ಓ ಗಜಾನನ ನಾಯ್ಕ, ಜಿಲ್ಲಾ ಆಸ್ಪತ್ರೆಯ ಸರ್ಜನ, ಕಿಮ್ಸ ಆರ್ ಎಮ್ ಓ ಸೇರಿದಂತೆ ಇನ್ನಿತರರು ಇದ್ದರು.