ಕಾರವಾರ: ಚುನಾವಣಾ ಪರ್ವ: ಜಿಲ್ಲೆಯಲ್ಲಿ ಅಬಕಾರಿ ದಾಳಿಯಿಂದ 1.06 ಕೋಟಿ ರೂ. ಮದ್ಯ ವಶ

ಕಾರವಾರ 19: ಉತ್ತರ ಕನ್ನಡ ಜಿಲ್ಲೆಯ ಚುನಾವಣ ಪ್ರಕ್ರಿಯೆ ಆರಂಭವಾದಾಗಿನಿಂದ ಜಿಲ್ಲೆಯ ವಿವಿದೆಡೆ ಸತತ ದಾಳಿ ಮುಂದುವರಿಸಿದೆ. ಅಕ್ರಮ ಮದ್ಯ ಸಾಗಾಟದ ಹಲವು ಪ್ರಕರಣ ದಾಖಲಿಸುತ್ತಿದ್ದು, ಕೆಲವರನ್ನು ಹಿಡಿದು ಬಂಧಿಸಿ ಪ್ರಕರಣಗಳನ್ನು ದಾಖಲಿಸಿದೆ. ಅಕ್ರಮ ಮದ್ಯ ಸಂಗ್ರಹದ ಸ್ಥಳಗಳ ಮೇಲೆ ದಾಳಿ ಮಾಡಿದೆ. ವಾಹನಗಳಲ್ಲಿ ಅಕ್ರಮವಾಗಿ ಮದ್ಯ ಸಾಗಾಟದ ಪ್ರಕರಣಗಳಲ್ಲಿ ವಾಹನಗಳನ್ನು ಸಹ ವಶಕ್ಕೆ ತೆಗೆದುಕೊಂಡಿದೆ. ಎ.17 ರವರೆಗೆ ಜಿಲ್ಲೆಯಲ್ಲಿ ವಿವಿಧ ದಾಳಿಗಳಿಂದ 31,955 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ವಶಪಡಿಸಿಕೊಂಡ ಮದ್ಯವೂ ಸೇರಿದೆ. 59,89,000.00 ರೂ. ಬೆಲೆಯ ಮದ್ಯ ವಶವಾಗಿದೆ. 13 ದ್ವಿಚಕ್ರವಾಹನಗಳು ವಶವಾಗಿವೆ. ಎರಡು ಆಟೋ, ನಾಲ್ಕು ಕಾರು, 1 ಲಾರಿ ಸಹ ವಶವಾಗಿವೆ. ವಶಪಡಿಸಿಕೊಂಡ ವಾಹನಗಳ ಬೆಲೆ 46 ಲಕ್ಷ ರೂ. ಆಗಿದೆ. ಒಟ್ಟು 1.06 ಕೋಟಿ ರೂ. ಸ್ವತ್ತು ಅಬಕಾರಿ ದಾಳಿಯಿಂದ ವಶವಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. 

ಗುರುವಾರ ನಡೆದ ದಾಳಿ:

ಎ.18 ಗುರುವಾರ ಹಾಡವಾಡದ ಅರಣ್ಯ ಪ್ರದೇಶದಲ್ಲಿ ಖಚಿತ ಸುಳುವಿನ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು 15 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಇದು ಗೊವಾದಿಂದ ಅಕ್ರಮ ಸಾಗಿಸಿ ಸಂಗ್ರಹಿಸಲಾಗಿತ್ತು. 

ಹಾಗೆಯೇ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಓರ್ವನನ್ನು ಅಬಕಾರಿ ಅಧಿಕಾರಿಗಳು  ಕಾರವಾರದ ಅಣ್ಣಪ್ಪ ಬಡಿಗೇರ ಎಂಬಾತನನ್ನು ಹಿಡಿದು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಆತನಿಂದ 27 ಲೀಟರ್ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ. ಹಾಗೂ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ವಾಹನ ಸಹಿತ 43200 ರೂ. ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.