ಪಿಕೆಪಿಎಸ್ ಆಡಳಿತ ಮಂಡಳಿಯ ಚುನಾವಣೆ ರಿಯಾಜ ಯಲಗಾರ ಬೆಂಬಲಿತ ಸದಸ್ಯರಿಗೆ ಭರ್ಜರಿ ಗೆಲುವು
ದೇವರಹಿಪ್ಪರಗಿ 15: ಪಟ್ಟಣದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಚುನಾವಣೆಯಲ್ಲಿ ರಿಯಾಜ್ ಯಲಗಾರ, ಕಾಸುಗೌಡ ಬಿರಾದಾರ, ಕಾಸು ಜಮಾದಾರ ನೇತೃತ್ವದ ಬಣ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ವಿ.ಪ್ರಾ.ಗ್ರಾ.ಕೃ.ಸ. ಸಂಘದ ಆಡಳಿತ ಮಂಡಳಿಯ 10 ಸ್ಥಾನಗಳಿಗೆ ಭಾನುವಾರ ಜರುಗಿದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಒಂದೇ ಬಣದ ಹತ್ತು ಅಭ್ಯರ್ಥಿಗಳು ಅಧಿಕ ಮತಗಳನ್ನು ಪಡೆಯುವುದರ ಮೂಲಕ ಜಯಗಳಿಸಿದರು. ಒಟ್ಟು 12 ಜನ ಸದಸ್ಯರ ಆಡಳಿತ ಮಂಡಳಿಗೆ ಹಿಂದುಳಿದ ವರ್ಗ ‘ಅ’ ಮೀಸಲು ಸ್ಥಾನದಿಂದ ಒಬ್ಬರು ಹಾಗೂ ಪರಿಶಿಷ್ಟ ಜಾತಿಯ ಮೀಸಲು ಸ್ಥಾನದಿಂದ ಒಬ್ಬರು ಹೀಗೆ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು ಇನ್ನೂಳಿದ ಸಾಮಾನ್ಯ ಸ್ಥಾನ-05 ಮಹಿಳಾ ಮೀಸಲು-02 ಹಿಂದುಳಿದ ವರ್ಗ ‘ಬ’ ಸ್ಥಾನ-01, ಪರಿಶಿಷ್ಟ ಪಂಗಡ-01, ಬಿನ್ ಸಾಲಗಾರರ ಕ್ಷೇತ್ರ-01 ಹೀಗೆ ಒಟ್ಟು-10 ಸ್ಥಾನಗಳಿಗೆ ಚುನಾವಣೆ ಜರುಗಿತು.ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಗಳಿಗೆ ಹಣಮಂತ್ರಾಯ ಜೋಗೂರ, ಬಸವರಾಜ ತಾಳಿಕೋಟಿ, ಶಾಂತಪ್ಪ ಬಿರಾದಾರ, ಮೋದಿನಸಾಬ್ ಯಲಗಾರ, ರಾಜೇಂದ್ರ ಭಾವಿಮನಿ. ಮಹಿಳಾ ಮೀಸಲು ಸ್ಥಾನಗಳಿಗೆ ಶೃತಿ ಕೋಟಿನ್, ಪ್ರಭಾವತಿ ಮಠಪತಿ, ಹಿಂದುಳಿದ ವರ್ಗ ‘ಬ’ ಸ್ಥಾನಕ್ಕೆ ಸಂತೋಷ ದೇಸಾಯಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಸೋಮು ಜಾಧವ, ಬಿನ್ ಸಾಲಗಾರ ಕ್ಷೇತ್ರದಿಂದ ನೀಲಮ್ಮ ಜಂಬಗಿ ಚುನಾಯಿತರಾದರು.ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಬೆಳಿಗ್ಗೆ 9 ರಿಂದ ಸಾಯಂಕಾಲ 4 ರವರೆಗೆ ನಡೆದ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದ್ದು ವಿಧಾನಸಭಾ ಚುನಾವಣೆಯಂತೆ ಕಂಡು ಬಂತು. ಸಾಯಂಕಾಲ ಮತಗಳ ಎಣಿಕೆ ನಡೆದು ನಂತರ ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಬೆಂಬಲಗರು ವಿಜೇತರನ್ನು ಸನ್ಮಾನಿಸಿದರು. ನಂತರ ಬಣ್ಣ ಎರಚಿ, ಸಿಹಿ ಹಂಚಿ, ಪಟಾಕಿ ಸಿಡಿಸುವುದರ ಮೂಲಕ ವಿಜಯೋತ್ಸವ ಆಚರಿಸಿದರು.ಚುನಾವಣೆ ಅಧಿಕಾರಿಯಾಗಿ ದತ್ತಾತ್ರೆಯ ನಾಯ್ಕೋಡಿ, ಪಿಕೆಪಿಎಸ್ ಕಾರ್ಯದರ್ಶಿ ಶರಣಗೌಡ ಅಂಗಡಿ ಸಹಕರಿಸಿದರು.ಇದೇ ಸಂದರ್ಭದಲ್ಲಿ ಮುಖಂಡರಾದ ಜಿ.ಎನ್.ಕೊರಿ, ವೀರೇಶ ಕುದುರಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.