ಮಮತಾ ಬ್ಯಾನರ್ಜಿ ಜೀವನಾಧಾರಿತ ಚಿತ್ರದ ಟ್ರೇಲರ್ ಗೆ ಚುನಾವಣಾ ಆಯೋಗ ತಡೆ


ಕೋಲ್ಕತಾ, ಏ 24  ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೀವಾನಾಧಾರಿತ ಚಿತ್ರ 'ಭಗಿನಿ'ಯ ಟ್ರೇಲರ್ ಅನ್ನು ತಡೆಹಿಡಿಯುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಟ್ರೇಲರ್ ಹಿಂಪಡೆಯುವಂತೆ ಆಯೋಗದ ಆದೇಶದ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮಮತಾ, 'ಇದೇನು ಅಸಂಬದ್ಧ ಸುದ್ದಿ ಹಬ್ಬುತ್ತಿದೆ. ನನಗೂ ಆ ಚಿತ್ರಕ್ಕೂ ಯಾವುದೆ ಸಂಬಂಧವಿಲ್ಲ' ಎಂದು ಕಿಡಿಕಾರಿದ್ದಾರೆ.  

'ಕೆಲ ಯುವಜನರು ತಮ್ಮ ಕುರಿತು ಕಥೆಗಳನ್ನು ಸಂಗ್ರಹಿಸಿ ಚಿತ್ರ   ನಿರ್ಮಿಸಲು ಮುಂದಾಗಿದ್ದಾರೆ. . ಇದು ಅವರಿಗೆ ಬಿಟ್ಟ ವಿಷಯ. ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿಯಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಜನರು ತನಗೆ ಮಾನನಷ್ಟ ಮೊಕದ್ದಮೆ ದಾಖಲಿಸಲು ಪ್ರೇರೇಪಿಸುತ್ತಿದ್ದಾರೆ' ಎಂದಿದ್ದಾರೆ.  

ಇದಕ್ಕೂ ಮುನ್ನ,  ರಾಜ್ಯದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ  ಮಮತಾ ಬ್ಯಾನರ್ಜಿ ಅವರ ಜೀವನಾಧಾರಿತ 'ಭಗಿನಿ; ಬೆಂಗಾಲ್ ಟೈಗ್ರೆಸ್ ' ಚಿತ್ರದ ಟ್ರೇಲರ್ ತಡೆಹಿಡಿಯಬೇಕು ಎಂದು ಕೋರಿ ರಾಜ್ಯದ ವಿಪಕ್ಷಗಳಾದ ಸಿಪಿಐ (ಎಂ) ಹಾಗೂ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಈ ಸಂಬಂಧ ಬಿಜೆಪಿ ಸುಪ್ರೀಂಕೋರ್ಟ್ ಗೂ ಅರ್ಜಿ  ಸಲ್ಲಿಸಿತ್ತು.  

ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ ' ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಬಿಜೆಪಿ ಈ ಚಿತ್ರದ ವಿರುದ್ಧ ಹೋರಾಟ ಆರಂಭಿಸಿತ್ತು. ಇದನ್ನು 'ಮಮತಾ ಅವರ ಬೂಟಾಟಿಕೆ' ಎಂದು ಬಣ್ಣಿಸಿತ್ತು.  ಚಿತ್ರದ ಟ್ರೇಲರ್ ಬಂಗಾಳಿ ಭಾಷೆಯಲ್ಲಿದ್ದು, ನಿದರ್ೆಶಕ ನೇಹಾಲ್ ದತ್ತ ಚಿತ್ರದ ಹೊಣೆ ಹೊತ್ತುಕೊಂಡಿದ್ದಾರೆ. ಇದರಲ್ಲಿ ಇಂದಿರಾ ಬಂಡೋಪಾಧ್ಯಾಯ್ ಎಂಬ ಮಹಿಳೆ ರಾಜಕೀಯ ನಾಯಕಿಯಾಗಿದ್ದು, ಬೆಂಬಲಿಗರು ಆಕೆಯನ್ನು ಪ್ರೀತಿಯಿಂದ 'ದೀದಿ' ಎಂದು ಕರೆಯುತ್ತಿರುತ್ತಾರೆ. ಈ ಪಾತ್ರವನ್ನು ರುಮಾ ಚಕ್ರವರ್ತಿ  ನಿರ್ವಹಿಸಿದ್ದಾರೆ.  ಬಿಳಿ ವಸ್ತ್ರ ಧರಿಸಿರುವ ಈ ಪಾತ್ರಧಾರಿ ಬಡ ರೈತರ ಹಕ್ಕಿಗಾಗಿ ಹೋರಾಟ ನಡೆಸುತ್ತಾರೆ. ವಿಪಕ್ಷಗಳು ಈ ಚಿತ್ರವನ್ನು ರಾಜಕೀಯ ಪ್ರಚಾರ ಎಂದು ಆರೋಪಿಸಿವೆ. ಆದರೆ, ಚಿತ್ರ ನಿರ್ಮಾಪಕರು  ಮಾತ್ರ ಇದು ಕೇವಲ ಮಮತಾ ಅವರ ಜೀವನ ಹಾಗೂ ರಾಜಕೀಯ ಪಯಣದಿಂದ ಪ್ರೇರಣೆ ಪಡೆದ ಚಿತ್ರ ಎಂದು ಸಮಜಾಯಿಷಿ ನೀಡಿದ್ದಾರೆ. ಚಿತ್ರ ಮೇ 3 ರಂದು ಬಿಡುಗಡೆ ಕಾಣಲು ಸಿದ್ಧವಾಗಿದೆ.  

ಈಗಾಗಲೇ ಚುನಾವಣಾ ಆಯೋಗ, ಉಮಂಗ್ ಕುಮಾರ್ ಅವರ 'ಪಿಎಂ ನರೇಂದ್ರ ಮೋದಿ' ಚಿತ್ರದ ಬಿಡುಗಡೆಗೆ ಚುನಾವಣೆ ಅಂತ್ಯಗೊಳ್ಳುವರೆಗೆ ತಡೆ ನೀಡಿದೆ.