ಬೆಂಗಳೂರು 9: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ಕರಡು ನೀತಿ 2019 ಶೈಕ್ಷಣಿಕ ಕ್ಷೇತ್ರದ ಸಮಗ್ರ ಸುಧಾರಣೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು, ಮಾತೃಭಾಷೆ ಹಾಗೂ ಇತರ ಭಾಷೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶ್ರೀ ಸತ್ಯ ಸಾಯಿ ಉನ್ನತ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವವನ್ನು ಉದ್ಘಾಟಿಸಿದ ಅವರು, ಯುವಜನತೆ ಎಲ್ಲಾ ಭಾಷೆಗಳನ್ನು ಅರಿತಿರಬೇಕು ಎಂಬ ಉದ್ದೇಶದಿಂದ ಮಾತೃಭಾಷೆಯ ಜೊತೆಗೆ ಇತರ ಭಾಷೆಗಳಿಗೆ ಆದ್ಯತೆ ನೀಡಲಾಗಿದೆ. ಮಾತೃಭಾಷೆ ಮನುಷ್ಯನ ಕಣ್ಣುಗಳಿದ್ದಂತೆ. ಇತರ ಭಾಷೆಗಳು ಕನ್ನಡಕದಂತೆ. ಆದ್ದರಿಂದ ಎರಡಕ್ಕೂ ಅದರದ್ದೇ ಆದ ಮಹತ್ವವಿದೆ. ಜನರು ಮಾತೃಭಾಷೆಯನ್ನು ನಿರ್ಲಕ್ಷಿಸಬಾರದು. ಬದಲಿಗೆ, ಹೆಮ್ಮೆಯಿಂದ ಅದನ್ನು ಪ್ರೋತ್ಸಾಹಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಶಿಕ್ಷಣದ ಕರಡು ನೀತಿಯ ಕುರಿತು ದೇಶದಲ್ಲಿ ಉಂಟಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರಡು ಪ್ರತಿಯನ್ನು ಪೂರ್ಣವಾಗಿ ಓದದೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಸರಿಯಲ್ಲ. ಇದೊಂದು ಮಹತ್ವದ ಮಸೂದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ನಂತರವಷ್ಟೇ ಪ್ರತಿಕ್ರಿಯಿಸಬೇಕು. ಜನರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿ, ಅದರಲ್ಲಿ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಂಡ ನಂತರವೇ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದರು.
ಯುವಜನತೆಗೆ 21ನೇ ಶತಮಾನದ ಸ್ಪರ್ಧಾತ್ಮಕ ಯುಗಕ್ಕೆ ಬೇಕಾದ ಜ್ಞಾನ, ಕೌಶಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯನ್ನು ಮರುರೂಪಿಸಬೇಕಿದೆ. ಜನರು ಶಿಕ್ಷಿತರಾದಾಗ ಮಾತ್ರ ರಾಷ್ಟ್ರಗಳು ಸಮೃದ್ಧಿ ಹೊಂದಬಲ್ಲವು ಎಂದರು.
ಶ್ರೀ ಸತ್ಯ ಸಾಯಿ ಬಾಬಾ ಅವರ ಶೈಕ್ಷಣಿಕ ದೃಷ್ಟಿಕೋನ ಇಂದಿಗೂ ಪ್ರಸ್ತುತವಾಗಿದ್ದು, ಮಾನವೀಯತೆಗೆ ಅವರು ನೀಡಿರುವ ಕೊಡುಗೆಗಳೂ ಅವಿಸ್ಮರಣೀಯ ಎಂದರು.
ಶಿಕ್ಷಣದ ಕುರಿತು 1964-68ರ ಅವಧಿಯಲ್ಲಿ ಕೊಠಾರಿ ಆಯೋಗ ನೀಡಿದ್ದ ವರದಿಗಳಲ್ಲಿ 'ನಮ್ಮ ಹಣೆಬರಹ ತರಗತಿಗಳಲ್ಲಿ ರಚನೆ'ಯಾಗುತ್ತದೆ ಎಂದು ಉಲ್ಲೇಖಿಸಿದೆ. ಮುಂದಿನ ಕೆಲ ವರ್ಷಗಳಲ್ಲಿ ದೇಶದ ಸಾಕ್ಷರತೆಯನ್ನು ಹೆಚ್ಚಿಸಬೇಕಿದೆ ಎಂದ ನಾಯ್ಡು ಅವರು, ಇಂದಿನ ಜನಸಂಖ್ಯೆ ಓದಿ, ಬರೆಯುವ, ಗಣಕೀಕರಣದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ಹೆಚ್ಚಿನ ಆತ್ಮವಿಶ್ವಾಸದಿಂದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೂಡ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ಶಾಲಾ ವ್ಯವಸ್ಥೆಗಳು ಹೆಚ್ಚು ಮಕ್ಕಳ ಸ್ನೇಹಿ ಹಾಗೂ ಮಕ್ಕಳ ಸ್ವಾಭಾವಿಕ ಗುಣಗಳ ಬೆಳವಣಿಗೆಗೆ ಪೂರಕವಾಗಿರಬೇಕು. ನಂತರ, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮರುರಚಿಸಿ, ಸಂಶೋಧನೆ ಹಾಗೂ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಭಾರತ ಇಂದು ಜ್ಞಾನಾಧಾರಿತ ಆಥರ್ಿಕತೆಯನ್ನು ಹೊಂದಿದ್ದು, ಕಳಪೆ ಗುಣಮಟ್ಟದ ಇಲ್ಲವೇ ಅಪೂರ್ಣ ಶಿಕ್ಷಣ ವ್ಯವಸ್ಥೆಯಿಂದ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವುದು ಅಸಾಧ್ಯ ಎಂದರು.
ಶೈಕ್ಷಣಿಕ ಸಂಸ್ಥೆಗಳು ವ್ಯಕ್ತಿಯ ವ್ಯಕ್ತಿತ್ವದ ಸಂಪೂರ್ಣ ವಿಕಸನಕ್ಕೆ ಕಾರಣವಾಗಬೇಕು ಎಂದ ಅವರು, ಮನುಷ್ಯನ ತಲೆ, ಕೈ ಹಾಗೂ ಹೃದಯ ಒಟ್ಟಿಗೆ ಬೆಳೆಯಬೇಕು. ಉತ್ತಮ ಶಿಕ್ಷಣ ನಮ್ಮನ್ನು ಅಜ್ಞಾನ, ಮೂಢನಂಬಿಕೆ, ಧರ್ಮದಂತೆ , ಪೂರ್ವಾಗ್ರಹ ಪೀಡಿತ ಹಾಗೂ ಸಂಕುಚಿತ ದೃಷ್ಟಿಕೋನದಿಂದ ಮುಕ್ತಗೊಳಿಸುತ್ತದೆ ಎಂದರು.
ಉತ್ತಮ ಗುಣಮಟ್ಟದ ಶಿಕ್ಷಣ ಓರ್ವ ವ್ಯಕ್ತಿ, ದೇಶ ಹಾಗೂ ವಿಶ್ವಕ್ಕೆ ಕಲ್ಪವೃಕ್ಷವಾಗಬಲ್ಲದು. ಇದೊಂದು ಅಪರೂಪದ ಆಸ್ತಿ. ಎಲ್ಲಾ ಆಸ್ತಿಗಳ ಪೈಕಿ ಶಿಕ್ಷಣ ಎಂಬುದು ಪ್ರಮುಖವಾಗಿದ್ದು, ಇದು ಇತರರೊಂದಿಗೆ ಹಂಚಿಕೊಂಡಷ್ಟೂ ಹೆಚ್ಚಾಗುತ್ತದೆ ಎಂದರು.