ಮಾದಕ ವ್ಯಸನದಿಂದ ಸಮಾಜದ ಸ್ವಾಸ್ಥ್ಯ ಹಾಳು: ನಾರಾಯಣ ಬರಮನಿ

Drug addiction is ruining society's health: Narayana Baramani

ಮಾದಕ ವ್ಯಸನದಿಂದ ಸಮಾಜದ ಸ್ವಾಸ್ಥ್ಯ ಹಾಳು: ನಾರಾಯಣ ಬರಮನಿ 

ಧಾರವಾಡ 10: ಮಾದಕ ದ್ರವ್ಯಗಳ ಸೇವನೆಯಿಂದ ನಮ್ಮ ಯುವ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರಿ, ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದೆ. ನಾವಿಂದು ನಮ್ಮ ಖುಶಿಗಾಗಿ ಚಟವನ್ನು ಆರಂಭಿಸುತ್ತೇವೆ.  ಅದು ದಿನೇ ದಿನೇ ನಮ್ಮನ್ನು ಆವರಿಸಿಕೊಂಡು ನಾವು ನಮ್ಮತನವನ್ನೇ ಮರೆಯುತ್ತೇವೆ.  ಇದರಿಂದಾಗಿ ದುಶ್ಚಟಗಳಿಗಾಗಿ ಅಪಾರ ಪ್ರಮಾಣದ ಹಣದ ಅವಶ್ಯಕತೆಯಿಂದಾಗಿ ಕೊಲೆ, ದರೋಡೆಯಂತಹ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆಗೊಳಗಾಗುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ ಹೇಳಿದರು.   

ದಿ. 10ರಂದು ಧಾರವಾಡ ಶ್ರೀನಗರದ ಉಷಾ ಸಭಾಂಗಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಎಸ್‌.ಆರ್‌.ತಲ್ಲೂರ ಫೌಂಡೇಶನ್, ಕುಮಾರೇಶ್ವರ ಕಲ್ಚರಲ್ ಸೊಸೈಟಿ, ಯುನೈಟೆಡ್ ಸೆಕ್ಯೂರಿಟಿ ಫೋರ್ಸ್‌, ಹುಬ್ಬಳ್ಳಿ ವಾಲ್ಮೀಕಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ಧಾರವಾಡ ಇವರ ಸಹಯೋಗದಲ್ಲಿ ಏರಿ​‍್ಡಸಿದ್ದ ಮಾದಕ ವ್ಯಸನದ ಕುರಿತು ಅರಿವು ಮತ್ತು ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿದ ನಾರಾಯಣ ಬರಮನಿಯವರು ಮಾತನಾಡುತ್ತ ಎಲ್ಲ ತರಹದ ಕೃತ್ಯಗಳಿಗಿರುವ ಶಿಕ್ಷೆಗಳಿಗಿಂತ ಹೆಚ್ಚು ಅವಧಿಯ ಕಠೀಣ ಶಿಕ್ಷೆಯನ್ನು ಮಾದಕ ದ್ರವ್ಯಗಳ ಪೂರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ವಿಧಿಸಲಾಗುತ್ತಿದೆ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿವಾಯ್‌ಎಸ್‌ಪಿ ಶಿವಾನಂದ ಕಟಗಿಯವರು ಮಾತನಾಡುತ್ತ ದೇಶದ ಅಭಿವೃದ್ಧಿಯಲ್ಲಿ ನಮ್ಮ ಯುವ ಶಕ್ತಿಯ ಪಾತ್ರ ಮಹತ್ವದ್ದಾಗಿದೆ.  ಇಂತಹ ಯುವಶಕ್ತಿಯಲ್ಲಿ  ಶೇ.10 ರಷ್ಟು ಜನ ದುಶ್ಚಟಗಳಿಗೆ ಅಂಟಿಕೊಂಡು ಅದರಿಂದ ಹೊರಬರಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.  ದುಶ್ಚಟಗಳಿಗೆ ಅಂಟಿಕೊಂಡಾಗ ಅವರಿಗೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆಗಳನ್ನು ನೀಡಬೇಕಾಗುತ್ತದೆ.  1985ರ ಎನ್‌ಡಿಪಿಎಸ್ ಕಾಯ್ದೆಯನ್ವಯ ಮಾಧಕ ದ್ರವ್ಯಗಳನ್ನು ಹಂಚಿಕೆ ಮಾಡುವವರಿಗೆ ಅತೀ ಹೆಚ್ಚು ಶಿಕ್ಷೆಗೆ ಗುರಿಯಾಗುತ್ತಾರೆ, ಇಂತಹ ದುಶ್ಚಟಗಳಿಂದ ದೂರವಿರಲು ನಮ್ಮ ಯುವ ಸಮಾಜಕ್ಕೆ ಅರಿವು ಮೂಡಿಸುವುದರಲ್ಲಿ ಯುವಮಿತ್ರರೆಲ್ಲ ಸೇರಿ ರಾಯಭಾರಿಗಳಂತೆ ಕೆಲಸ ಮಾಡೋಣ ಎಂದರು.   

ಅಧ್ಯಕ್ಷತೆ ವಹಿಸಿದ್ದ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡುತ್ತ ಯಾವುದು ಸರಿ, ಯಾವುದು ತಪ್ಪು, ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಮನುಷ್ಯ ತನ್ನ ಮನಸ್ಸನ್ನು ಕೇಳಿ ಮಾಡಿದರೆ ಅದು ಹೇಳುತ್ತದೆ.  ತಪ್ಪು ಕೆಲಸ ಮಾಡುತ್ತಿದ್ದರೆ ಅದು ತಪ್ಪು, ಅದನ್ನು ಮಾಡಬೇಡ ಎಂದು ಹೇಳುತ್ತದೆ. ಹಣದ ದಾಹ ಇಂದು ಮನುಷ್ಯನ ಮನಸ್ಸನ್ನು ಹಾಳು ಮಾಡುತ್ತಿದೆ ಎಂದರು.   

ಸಂಜಯ ಇಂಚಲ, ಸುಜಾತಾ ಗದಗ, ಎಸ್‌.ಆರ್‌.ತಲ್ಲೂರ ಫೌಂಡೇಶನ್ ಕಾರ್ಯದರ್ಶಿ ಡಾ.ಸುಮಾ ತಲ್ಲೂರ, ಪ್ರಕಾಶ ಬಾಳಿಕಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ನಂತರ ಜರುಗಿದ ಗೋಷ್ಠಿಯಲ್ಲಿ ಧಾರವಾಡ ಜರ್ನಲಿಸ್ಟ್‌ ಗಿಲ್ಡ್‌ನ ಅಧ್ಯಕ್ಷ ಡಾ.ಬಸವರಾಜ ಹೊಂಗಲ, ಯುನೈಟೆಡ್ ಸೆಕ್ಯೂರಿಟಿ ಪೋರ್ಸ್‌ ನಿರ್ದೇಶಕ ಸಂತೋಷ ಇಂಚಲ ಮಾತನಾಡಿದರು.  ಡಾ.ಬಸವರಾಜ ತಲ್ಲೂರ ಪ್ರಾಸ್ತಾವಿಕ ಮಾತನಾಡಿದರು.  ಅಶ್ವಿನಿ ಮೊಕಾಶಿ ನಿರೂಪಿಸಿದರು.  ಜ್ಯೋತಿ ಹುಲಮನಿ ಸ್ವಾಗತಿಸಿದರು.  ನೆಹರು ಯುವ ಕೇಂದ್ರದ ಶಿವಾಜಿ ಕಡ್ಡೆಪ್ಪನವರ ವಂದಿಸಿದರು.    

ದೇವರಾಜ ದೊರೆ, ಪ್ರಮೋದ ಸೂರಣಗಿ, ಮಹೇಶ ಕಾಲತಿಪ್ಪಿ, ಹಾಲೇಶ ಚಲವಾದಿ, ರೋಹಿತ ರಾಠೋಡ್, ಆಕಾಶ ಮಡಿವಾಳರ, ಸಿದ್ಧಾರೂಡ ಕರೆಣ್ಣವರ, ಲಕ್ಷಣ ಕೋಟೂರ, ಪವಿತ್ರಾ ಮುಗಳಿ, ಸಿಂಧು ದಾಸರ, ಮಧು ಹೈಬತ್ತಿ ಚೈತ್ರಾ ಹರಹುಣಸಿ ಮುಂತಾದವರು ಉಪಸ್ಥಿತರಿದ್ದರು.