ಕೃಷಿ ಬೆಳೆಗಳಿಗೆ ರಸಾಯನಿಕಗಳ ಸಿಂಪರಣೆಗೆ ಡ್ರೋನ್ ತಂತ್ರಜ್ಞಾನ: ಚರ್ಚಾಗೋಷ್ಠಿಗಳು

ಕೃಷಿ ಬೆಳೆಗಳಿಗೆ ರಸಾಯನಿಕಗಳ ಸಿಂಪರಣೆಗೆ ಡ್ರೋನ್ ತಂತ್ರಜ್ಞಾನ: ಚರ್ಚಾಗೋಷ್ಠಿಗಳು Drone technology for spraying chemicals on agricultural crops: Discussions

 ಗದಗ 19 : ಕೃಷಿ ಬೆಳೆಗಳಲ್ಲಿ ಕೀಟ-ರೋಗ ಬಾಧೆ ತಡೆಗಟ್ಟಲು ರಾಸಾಯನಿಕ ಓಷಧಿಗಳು ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳ ಸಿಂಪರಣೆ ಮಾಡುವ ಪ್ರಕ್ರಿಯೆ ತುಂಬಾ ಮುಖ್ಯವಾದದ್ದು. ಸಮಯಕ್ಕೆ ಸರಿಯಾಗಿ ಸಿಂಪರಣೆ ಕೈಗೊಳ್ಳದೇ ಹೋದರೆ ಸಸ್ಯದ ಆರೋಗ್ಯ ನಶಿಸಿ, ಸುಮಾರು ಶೇ.20-30 ರಷ್ಟು ಇಳುವರಿ ಕುಂಠಿತವಾಗುತ್ತದೆ. ಗದಗ ಜಿಲ್ಲೆಯ ಕ್ಷೇತ್ರ ಬೆಳೆಗಳಾದ ಹೆಸರು, ಗೋವಿನಜೋಳ, ಹತ್ತಿ, ಶೇಂಗಾ, ಕಡಲೆ, ಕುಸುಬೆ ಹಾಗೂ ಜೋಳ ಇವುಗಳಲ್ಲಿ ರಸ ಹೀರುವ ಕೀಟಗಳು, ಎಲೆ, ಕಾಂಡ ಮತ್ತು ತೆನೆ/ಕಾಯಿ ತಿನ್ನುವ ಕೀಟಗಳು ಹಾಗೂ ದುಂಡಾಣು, ನಂಜಾಣು ಮತ್ತು ಶೀಲೀಂಧ್ರಗಳಿಂದ ಬರುವ ವಿವಿಧ ರೋಗಗಳು ಸರ್ವೇ ಸಾಮಾನ್ಯ. ಈ ಬಾಧೆಗಳನ್ನು ಹತೋಟಿ ಮಾಡಲು ರೈತ ಬಾಂಧವರು ಎಕರೆಗೆ ಸುಮಾರು ರೂ. 1200 ರಿಂದ 2500 ರ ವರೆಗೆ ಕೇವಲ ರಸಾಯನಿಕ ಪರಿಕರಗಳ ಖರೀದಿಗಾಗಿ ಖರ್ಚು ಮಾಡುತ್ತಾರೆ.

ಇನ್ನು ಈ ರಸಾಯನಿಕಗಳನ್ನು ಸಿಂಪಡಿಸಲು ಕೂಲಿಯಾಳುಗಳಿಗೆ ದಿನಕ್ಕೆ ಸುಮಾರು ರೂ.400 ಗಳಷ್ಟು ಕೂಲಿ ಕೊಡಬೇಕಾಗುತ್ತದೆ.ರಸಾಯನಿಕಗಳನ್ನು ಸಿಂಪಡಿಸಲು ಬಳಸುವ ಬ್ಯಾಟರಿ ಹಾಗೂ ಎಂಜಿನ್ ಚಾಲಿತ ನ್ಯಾಪ್‌ಸ್ಯಾಕ್ ಸಿಂಪರಣಾ ಯಂತ್ರಗಳು ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದರೆ, ಟ್ರ್ಯಾಕ್ಟರ್ ಚಾಲಿತ ಯಂತ್ರಗಳು ದೊಡ್ಡ ಹಿಡುವಳಿದಾರರಿಗೆ ಸರಿಹೊಂದುತ್ತವೆ. ಒಂದನೇ ಹಂತದ ಸಿಂಪರಣೆಗೆ ರೈತರು ಈ ಯಂತ್ರಗಳನ್ನು ಉಪಯೋಗಿಸುತ್ತಿದ್ದರೂ, ಎರಡನೇ ಹಂತದ ಸಿಂಪರಣೆಯ ವೇಳೆಗೆ, ಬೆಳೆಗಳು ಹೆಚ್ಚು ಎತ್ತರಕ್ಕೆ ಬೆಳೆದು ನಿಂತಾಗ, ಕೂಲಿಯಾಳುಗಳಿಂದ ಅಥವಾ ಟ್ರ್ಯಾಕ್ಟರ್ ಚಾಲಿತ ಯಂತ್ರಗಳಿಂದ ಸಿಂಪರಣಾ ಕಾರ್ಯ ಕೈಗೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೇ ಅಪಾಯಕಾರಿ ರಸಾಯನಿಕಗಳು ದೇಹ ಸೇರುವ ಸಂಭವವಿರುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಬೆಳೆಗಳಿಗೆ ಸಿಂಪಡಿಸುವ ರಸಾಯನಿಕಗಳ ಸಂಪರ್ಕದಿಂದ ರೈತರು ಹಾಗೂ ಕೂಲಿಯಾಳುಗಳು ಸುಮಾರು 46 ಬಗೆಯ ವಿನಾಶಕಾರಿ ರೋಗಗಳಿಗೆ ತುತ್ತಾಗುತ್ತಾರೆ.  

ಈ ಸಮಸ್ಯೆಗಳನ್ನು ಎದುರಿಸಲು ಹಾಗೂ ಸಿಂಪರಣಾ ಕಾರ್ಯದ ದಕ್ಷತೆಯನ್ನು ಹೆಚ್ಚಿಸಲು ಡ್ರೋನ್ ತಂತ್ರಜ್ಞಾನವು ರೈತರ ಪಾಲಿಗೆ ವರವಾಗಿ ಬಂದಿದೆ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಡ್ರೋನ್ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ರಸಾಯನಿಕಗಳ ಸಿಂಪರಣೆಗೆ ಹೆಚ್ಚಾಗಿ ಈ ಯಂತ್ರಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಆಕಾಶದಲ್ಲಿ ಹಾರುತ್ತಾ ಕಾರ್ಯನಿರ್ವಹಿಸುವ ಡ್ರೋನ್‌ಗಳನ್ನು ನುರಿತ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಅನುಮೋದಿತ ರಿಮೋಟ ಪೈಲಟ್ ಪರವಾನಗಿ ಪಡೆದ ಚಾಲಕರು ನಿಯಂತ್ರಿಸುವರು. ಡ್ರೋನ್ ಸಿಂಪರಣಾ ಯಂತ್ರವು ಕೇವಲ 15 ನಿಮಿಷಗಳಲ್ಲಿ 1 ಎಕರೆಯಷ್ಟು ಜಮೀನಿನಲ್ಲಿ ಸಿಂಪರಣೆ ಕೈಗೊಳ್ಳುವುದರಿಂದ ಮಾನವ ಚಾಲಿತ ಯಂತ್ರಗಳಿಗೆ ಹೋಲಿಸಿದಾಗ ಶೇ. 80 ಕ್ಕೂ ಹೆಚ್ಚು ಸಮಯದ ಉಳಿತಾಯವಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಸುಮಾರು ಶೇ.20 ರಿಂದ 50 ರಷ್ಟು ರಸಾಯನಿಕಗಳ ಉಳಿತಾಯವೂ ಆಗುತ್ತದೆ.  

ಸಹಾಯಕ ಕೃಷಿ ಅಧಿಕಾರಿ ಮೇಘನಾ ನಾಡಿಗೇರ ಇವರು ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಡ್ರೋನ್ ಸಿಂಪರಣಾ ಯಂತ್ರದ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಯಂತ್ರದ ಖರೀದಿಗೆ ಸಹಾಯಧನ ನೀಡುವ ಕುರಿತು ಯೋಜನೆ ರೂಪಿಸಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು. ಐ.ಸಿ.ಎ.ಆರ್‌-ಗೇರು ಸಂಶೋಧನಾ ನಿರ್ದೇಶನಾಲಯದ ಲಲನ್‌ಕುಮಾರ ಹಾಗೂ ವಿಖ್ಯಾತ್ ಇವರು ಡ್ರೋನ್ ಪೈಲಟ್ ತರಬೇತಿ ಮತ್ತು ಪರವಾನಗಿ ಪಡೆಯುವ ವಿಧಾನಗಳ ಕುರಿತು ಮಾಹಿತಿ ನೀಡಿದರು ಹಾಗೂ ವಿವಿಧ ರೈತರ ಹೊಲಗಳಲ್ಲಿ ಡ್ರೋನ್ ಮೂಲಕ ಸಿಂಪರಣೆಯ ಪ್ರಾತ್ಯಕ್ಷಿಕೆ ನೀಡಿದರು. ಮೂರು ದಿನಗಳ ಕಾಲ ನಡೆದ ಪ್ರಾತ್ಯಕ್ಷಿಕೆಗಳಲ್ಲಿ ಒಟ್ಟು 6 ಗ್ರಾಮಗಳ 140 ಕ್ಕೂ ಹೆಚ್ಚು ರೈತರು ಹಾಗೂ ಯುವಕರು ಪ್ರಾತ್ಯಕ್ಷಿಕೆ ಹಾಗೂ ಚರ್ಚಾ ಗೋಷ್ಠಿಗಳಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು.ಬಾಕ್ಸ್‌  

ನಮ್ಮ ದೇಶದಲ್ಲಿ ಕೃಷಿ ಯಾಂತ್ರೀಕರಣವು ಒಳ್ಳೆಯ ಪ್ರಗತಿ ಸಾಧಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆ ಅದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ದಿನಗಳಲ್ಲಿ ಸಿಂಪರಣಾ ಕಾರ್ಯಕ್ಕೆ ಡ್ರೋನ್ ಯಂತ್ರದ ಬಳಕೆಯು ಮನೆಮಾತಾಗಲಿದೆ ಹಾಗೂ ಈ ನಿಟ್ಟಿನಲ್ಲಿ ಸಮರ​‍್ಕ ಸಂಶೋಧನೆಗಳನ್ನು ಕೈಗೊಂಡು ಈ ಹೊಸ ತಂತಜ್ಞಾನವನ್ನು ರೈತರ ಕೈಗೆಟುಕುವಂತಾಗಬೇಕು.ಡಾ. ವಿನಾಯಕ ನಿರಂಜನ್, ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಮುಂದಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ ಇನ್ನೂ ಉಲ್ಬಣವಾಗಲಿದ್ದು, ಈ ಹೊಸ ತಂತ್ರಜ್ಞಾನವು ರೈತರ ಕೈಗೆಟುಕಲು ಹೋಬಳಿ ಮಟ್ಟಗಳಲ್ಲಿ ಡ್ರೋನ್ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸಬೇಕು. ಇದರಿಂದ ರೈತರು ಹೆಚ್ಚು ಮಳೆಯಾದ ಸಂಧರ್ಭಗಳಲ್ಲಿ ಅಥವಾ ಕೂಲಿಯಾಳುಗಳ ಅಭಾವದಲ್ಲಿ ಡ್ರೋನ್ ಮೂಲಕ ಸಿಂಪರಣೆ ಮಾಡಿಸಲು ಅನುಕೂಲವಾಗುತ್ತದೆ.