ಡಾ. ದ.ರಾ.ಬೇಂದ್ರೆರವರ ಕವನಗಳು ದೇಶಿ ಸಂಸ್ಕೃತಿಯನ್ನು ಬಿಂಬಿಸುವಂತಹವು : ವಿಶ್ವೇಶ್ವರಿ ಬಸವಲಿಂಗಯ್ಯಾ ಹಿರೇಮಠ

ಡಾ. ದ.ರಾ.ಬೇಂದ್ರೆರವರ ಕವನಗಳು ದೇಶಿ ಸಂಸ್ಕೃತಿಯನ್ನು ಬಿಂಬಿಸುವಂತಹವು : ವಿಶ್ವೇಶ್ವರಿ ಬಸವಲಿಂಗಯ್ಯಾ ಹಿರೇಮಠ Dr. D.R.Bendre's poems reflect the indigenous culture: Visveswari Basavalingaiah Hiremath

ಧಾರವಾಡ 13 : ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾಸಂಘ, ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 12.03.2026 ರಂದು ಗುರುವಾರ ಸಾಯಂಕಾಲ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ  ಹಿರಿಯ ಸಂಗೀತ ಶಿಕ್ಷಕಿ ಡಾ. ಶಕ್ತಿ ಪಾಟೀಲ ರವರಿಂದ “ಕನ್ನಡದ ನವೋದಯದ ಶ್ರೇಷ್ಠ ಕವಿ ಡಾ.ದ.ರಾ.ಬೇಂದ್ರೆ ರವರ ಗೀತೆಗಳ ಸಿಂಚನ” ಕಾರ್ಯಕ್ರಮ ನಡೆಯಿತು.  ಹಿರಿಯ ಜಾನಪದ ಕಲಾವಿದೆ ವಿಶ್ವೇಶ್ವರಿ ಬಸವಲಿಂಗಯ್ಯಾ ಹಿರೇಮಠ ಕಾರ್ಯಕ್ರಮವನ್ನು ಜಾಂಘಟೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಇಂದಿಗು ಡಾ. ದ.ರಾ.ಬೇಂದ್ರೆರವರ ಕವಿತೆಗಳು ಪ್ರಚಲಿತದಲ್ಲಿದ್ದು ಅವರ ಕವನಗಳು ದೇಶಿ ಸಂಸ್ಕೃತಿಯನ್ನು ಬಿಂಬಿಸುವ ಕವನಗಳಾಗಿವೆ ಅಲ್ಲದೆ ಇಂತಂಹ ನವೋದಯ ಕವಿ ನಮ್ಮ ಧಾರವಾಡ ನೆಲೆಗಳ ಒಂದು ಕಳಸವಿದ್ದಂತೆ ಅವರು ರಚಿಸಿದ ಕವನಗಳು ಇಂದಿಗೂ ಜನಮನದಲ್ಲಿ ಹಾಸುಹೊಕ್ಕಾಗಿವೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಸರ್ವಕಾಲಿಕ ಬೆಳಕಾಗಿ ಬೆಳಗಿದವರು ಬೇಂದ್ರೆರವರು ಅವರನ್ನು ಸಾಮಾನ್ಯವಾಗಿ ಆಧುನಿಕ ಕನ್ನಡ ಕಾವ್ಯದ ಪಿತಾಮಹ ಎಂದೇ ಕರೆಯುತ್ತಾರೆ. ಬಹುಶಃ ಅವರ ಕಾವ್ಯಗಳ ಸಂಗ್ರಹದಲ್ಲಿ ದೇಶಭಕ್ತಿಯಿಂದ ವಿಮರ್ಶಾತ್ಮಕ ಮನೋಭಾವ, ಭಾರತೀಯ ಸಂಸ್ಖೃತಿ ಸಂಪ್ರದಾಯಿಕ ಶಕ್ತಿಯ ಪ್ರತಿಕವಾಗಿರುವ ಬೇಂದ್ರೆರವರ ಕವನಗಳಲ್ಲಿ ಕಾಣಬಹುದು ಅವರು ರಚಿಸಿದ ಕವನಗಳು ಸಂಗೀತಕ್ಕೆ ಹೊಂದಿಸಬಹುದಾಗಿದ್ದು ಇಂದಿಗೂ ಮನದ ಆಳದಲ್ಲಿ ಅಚ್ಚಳಿಯದೆ ಉಳಿದುಕೊಳ್ಳುತ್ತದೆ ಎಂದರು, 

    ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಂಗಭೂಮಿ ಹಿರಿಯ ಕಲಾವಿದ ರವಿ ಕುಲಕರ್ಣಿ ಮಾತನಾಡಿ ದ.ರಾ.ಬೇಂದ್ರೆರವರು ನವೋದಯ ಕಾಲದ ಅತ್ಯಂತ ಗಮನಾರ್ಹ ಕವಿಗಳಲ್ಲಿ ಒಬ್ಬರು, ಬೇಂದ್ರೆರವರು ಸರಳ ಮತ್ತು ಆಡು ಭಾಷೆಗಳಲ್ಲಿ ಮಾತನಾಡು ರೂಪವನ್ನು ಬಳಸುತ್ತಿದ್ದದ್ದು ಸಮಗ್ರ ವ್ಯಕ್ತಿತ್ವದ ಮೌಲ್ಯದಲ್ಲಿ ನಂಬಿಕೆ ಇಟ್ಟವರು ಶಾಸ್ತ್ರೀಯ ಶೈಲಿಯನ್ನು ಮತ್ತು ಗ್ರಾಮೀಣ ಮತ್ತು ಜಾನಪದ ಸಾಹಿತ್ಯಕ್ಕೆ ಸಾಂಪ್ರದಾಯಿಕ ಆಡುಮಾತಿನ ಭಾಷಾವೈಶಿಷ್ಠಗಳನ್ನು ಅವರು ರಚಿಸಿದ ಕವನಗಳಲ್ಲಿ ನಾವು ಕಾಣುತ್ತೇವೆ. ಈ ನಿಟ್ಟಿನಲ್ಲಿ ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾಸಂಘ ಎರಡು ಕಾರ್ಯವನ್ನು ಮಾಡುತ್ತಿದ್ದು ಕಲಾ ಸಂಘಟನೆಗಳು ಸಕ್ರಿಯವಾಗಿ ಕಾರ್ಯವನ್ನು ಮಾಡುತ್ತಿದ್ದು, ಸಂಘಟನೆಯ ಪದಾಧಿಕಾರಿಗಳು ಎಲ್ಲರೂ ಕೂಡಿ ಒಂದಾಗಿ ಕೆಲಸವನ್ನು ಮಾಡಿದರೆ ಮಾತ್ರ ಉತ್ತಮ ಸಂಘಟನೆಗಳು ಯಶ್ಸಸ್ಸನ್ನು ಕಾಣಬಹುದಾಗಿದ್ದು ಪ್ರೇಕ್ಷಕರಿಗೆ ಉತ್ತಮ ಕಾರ್ಯಕ್ರಮಗಳ ಜೊತೆಗೆ ಉತ್ತಮ ಯುವ ಕಲಾವಿದರನ್ನು ಬೆಳೆಸುವ ಸಂಘ ಇದಾಗಿದೆ ಮತ್ತು ಇಂತಹ ಯುವ ಕಲಾವಿದರನ್ನು ಗುರುತಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಸಂಗೀತ ಹಾಗೂ ನಾಟಕಗಳು ಉತ್ತಮ ಸಂದೇಶಗಳನ್ನು ನೀಡುವಂತಹ ಕಲೆಯಾಗಿದ್ದು ಸಮಾಜದಲ್ಲಿ ಇವುಗಳಿಂದ ಸಾಕಷ್ಟು ಕಲಿಯುವಂತಹದ್ದಾಗಿದೆ ಎಂದು ನುಡಿದರು. 

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಮಾರ್ತಾಂಡಪ್ಪ ಕತ್ತಿ ಮಾತನಾಡಿ ಕಲೆಯನ್ನು ಗುರುತಿಸುವುದು ಮಾತ್ರ ಸಂಘ ಸಂಸ್ಥೆಗಳಿಂದ ಮಾತ್ರ ಸಾಧ್ಯ ಒಂದು ಸಂಘ ತಾವು ಹಾಕಿಕೊಂಡ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಉತ್ತಮ ಕಾರ್ಯಕ್ರಮಗಳು ಮೂಡಿಬರಲು ಸಾಧ್ಯವಾಗಿದ್ದು ಕನ್ನಡ ಹಾಗೂ ಕೊಂಕಣಿ ಎರಡು ಸಂಘಗಳ ಹೆಸರಿನಲ್ಲಿ ಒಂದೆ ಸಂಘವನ್ನು ಹುಟ್ಟು ಹಾಕಿದ ನಮ್ಮ ಹಿರಿಯ ಪ್ರಸಾಧನ ಕಲಾವಿದರಾದ ಗಜಾನನ ಮಹಾಲೆಯವರನ್ನು ಆತ್ಮೀಯವಾಗಿ ಅವರ ನೆನಪುಗಳನ್ನು ಮೆಲಕು ಹಾಕಿದರು. ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ಶಿಕ್ಷಕಿ ಶಕ್ತಿ ಪಾಟೀಲರವರಿಗೆ “ಸಾಧನಾ ತಪಸ್ವಿ”, ಹಿರಿಯ ಜಾನಪದ ಕಲಾವಿದ ಡಾ.ಪ್ರಕಾಶ ಮಲ್ಲಿಗವಾಡರಿಗೆ “ಜಾನಪದದ ಪವರಸ್ಟಾರ್‌” ಹಾಗೂ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಗೋಪಾಲ ಉಣಕಲ್ ಇವರಿಗೆ “ ರಂಗ ಆರಾಧಕ” ಎಂಬ ಬಿರುದಾಂಕಿತದೊಂದಿಗೆ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಗೌರವ ಸನ್ಮಾನವನ್ನು ಮಾಡಲಾಯಿತು.  

       ಸಂಘದ ಉಪಾಧ್ಯಕ್ಷರಾದ ಅಪೂರ್ವಾ ಮಹಾಲೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿ ಸಂತೋಷ ಗಜಾನನ ಮಹಾಲೆ ಮಾಡಿದ್ದು, ಅಚ್ಚುಕಟ್ಟಾಗಿ ಆಡುಭಾಷೆಯಲ್ಲಿ ಕಾರ್ಯಕ್ರಮ ನಿರೂಪಣೆ ಸ್ನೇಹಾ ಪಟದಾರಿ ನೆರೆವೆರಿಸಿದರು. ವಂದನಾರೆ​‍್ಣ ಸಂಪ್ರೀತಾ ಮಹಾಲೆ ಮಾಡಿದರು, ಸ್ನೇಹಾ ಮಹಾಲೆ ಕೃತಿಕಾ, ತೀಶಾ ಹಾಗೂ ಸೋಹನ ಮಹಾಲೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಎಂ.ಎಂ. ಚಿಕ್ಕಮಠ, ಅನೀಲ ಮೇತ್ರಿ ಎಂ.ಜಿ.ನೂಲಕರ ಸೇರಿದಂತೆ ಹಲವಾರು ಸಂಗೀತಾಸಕ್ತರು ಉಪಸ್ಥಿತರಿದ್ದರು. ನಂತರ ಹಿರಿಯ ಸಂಗೀತ ಶಿಕ್ಷಕಿ ಡಾ. ಶಕ್ತಿ ಪಾಟೀಲ ರವರಿಂದ “ಕನ್ನಡದ ನವೋದಯದ ಶ್ರೇಷ್ಠ ಕವಿ ಡಾ.ದ.ರಾ.ಬೇಂದ್ರೆ ರವರ ಗೀತೆಗಳ ಸಿಂಚನ” ಮಲ್ಲೇಶ ಹೂಗಾರ ತಬಲಾ ಸಾಧಿ ನೀಡಿದ್ದು ತುಂಬಿದ ಪ್ರೇಕ್ಷಾಗೃಹದಲ್ಲಿ ನಡೆಯಿತು.