ಫಲಾನುಭವಿಗಳಿಗೆ ಇ-ಖಾತಾ ವಿತರಿಸಿ ಶಾಸಕ ತಮ್ಮಣ್ಣವರ ಅವರಿಂದ ಆಂದೋಲನಕ್ಕೆ ಚಾಲನೆ
ಹಾರೂಗೇರಿ 24 : ಕುಡಚಿ ಮತಕ್ಷೇತ್ರದ ಹಾರೂಗೇರಿ ಕುಡಚಿ ಮತ್ತು ಮುಗಳಖೋಡ ಪುರಸಭೆಗಳು ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಹೆಚ್ಚಿನ ಅನುದಾನವನ್ನು ತಂದು ಹೈಟೆಕ್ ಪಟ್ಟಣಗಳನ್ನಾಗಿ ರೂಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಫಲಾನುಭವಿಗಳಿಗೆ ಇ-ಖಾತಾ ವಿತರಿಸಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತಾಲೂಕಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಹಾರೂಗೇರಿ, ಮುಗಳಖೋಡ ಮತ್ತು ಕುಡಚಿ ಪಟ್ಟಣಗಳ ಅಭಿವೃದ್ಧಿ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದ್ದು, ಈ ಮೂರೂ ಪುರಸಭೆಗಳಿಗೆ ಹೆಚ್ಚಿನ ಅನುದಾನದ ನೀರೀಕ್ಷೆಯಲ್ಲಿದ್ದೇವೆ. ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸಂದಿಸಿ ಕೆಲಸ ಮಾಡಬೇಕೆಂದು ಶಾಸಕ ತಮ್ಮಣ್ಣವರ ಹೇಳಿದರು. ಪುರಸಭೆ ಅಧ್ಯಕ್ಷ ವಸಂತ ಲಾಳಿ ಮಾತನಾಡುತ್ತ ಹಾರೂಗೇರಿ ಪಟ್ಟಣವು 31ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 23 ವಾರ್ಡಗಳಿವೆ. ಒಂದು ವಾರ್ಡ ಅಭಿವೃದ್ಧಿ ಮಾಡಲು ತಲಾ ಒಂದೊಂದು ಕೋಟಿ ಅನುದಾನದ ಅಗತ್ಯವಿದೆ. ಲಭ್ಯವಿರುವ ಅನುದಾನದಲ್ಲಿ ಹಂತಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಉಪಾಧ್ಯಕ್ಷ ಬಸವರಾಜ ಅರಕೇರಿ ಮಾತನಾಡಿ ಸರ್ಕಾರದ ಈ ಯೋಜನೆಯಡಿ ಅನಧಿಕೃತ ಮನೆಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಿ ಇ-ಖಾತಾ ಉತಾರ ಪಡೆದುಕೊಳ್ಳಬೇಕು. ಇದರಿಂದ ಫಲಾನುಭವಿಗಳಿಗೆ ಸರ್ಕಾರದ ವಸತಿ ಮನೆಗಳ ಮಂಜೂರ, ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದರು. ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ಇ-ಖಾತಾ ಕುರಿತು ಮಾಹಿತಿ ನೀಡುತ್ತ ಪುರಸಭೆಯ ಎಲ್ಲ ಅಧಿಕೃತ ಆಸ್ತಿಗಳ ವಿವರಗಳನ್ನು ಎ. ರಿಜಿಸ್ಟರ್‌ನಲ್ಲಿ ನಮೂನೆ 3ರ ಪ್ರತಿಗಳು ಹಾಗೂ ಅನಧಿಕೃತ ಆಸ್ತಿಗಳನ್ನು ಬಿ. ಎಜಿಸ್ಟರ್‌ನಲ್ಲಿ ನಮೂದಿಸಿ ನಮೂನೆ 2ಎ/3ಎ ಪ್ರತಿಗಳನ್ನು ಆಸ್ತಿಗಳ ಮಾಲೀಕರಿಗೆ ನೀಡಲು ಸರಕಾರ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಎಲ್ಲಾ ಆಸ್ತಿ ಮಾಲೀಕರಿಗೆ ಹಾಗೂ ಅನುಭೋಗದಾರರಿಗೆ ಇ ಖಾತೆ ಮಾಡಿಕೊಳ್ಳಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಪುರಸಭೆ ಸದಸ್ಯರಾದ ಆನಂದ ಪಾಟೀಲ ಟಿಡಿಬಿ ಹೆಸರಿನಲ್ಲಿರುವ ಹಕ್ಕನ್ನು ವಾಸವಾಗಿರುವ ಫಲಾನುಭವಿಗಳ ಹೆಸರಿಗೆ ಹಸ್ತಾಂತರಿಸಬೇಕೆಂದರು. ನಾಮನಿರ್ದೇಶಿತ ಸದಸ್ಯರಾದ ಗುಂಡುರಾವ ಬದ್ನಿಕಾಯಿ, ಕಲ್ಲಪ್ಪ ಬಡಿಗೇರ, ಬುರಾನಸಾಬ ಶೇಖ, ಸಹದೇವ ಲಾಳಿ, ಪರಗೌಡ ಉಮರಾಣಿ, ರಾಜು ಅರಳಿಕಟ್ಟಿ, ಮಾಳು ಹಾಡಕಾರ, ಮಲ್ಲು ಕಾಂಬಳೆ, ಭಾರತಿ ಜೋಗಣ್ಣವರ, ವರ್ಧಮಾನ ಶಿರಹಟ್ಟಿ, ಭೀಮು ಚೌಗಲಾ, ಜ್ಞಾನೇಶ್ವರ ಧರ್ಮಟ್ಟಿ, ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ ಸೇರಿದಂತೆ ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಹಿರಿಯ ರಾಜಕೀಯ ಮುಖಂಡರಾದ ಅಶೋಕ ಅರಕೇರಿ ಕಾರ್ಯಕ್ರಮ ನಿರೂಪಿಸಿದರು.