ಧರ್ಮಸ್ಥಳ ಪ್ರಕರಣ: ಅಪಪ್ರಚಾರದ ಒಳಸಂಚು ರೂಪಿಸಿದವರ ತನಿಖೆಯಾಗಲಿ

ಧರ್ಮಸ್ಥಳ ಪ್ರಕರಣ: ಅಪಪ್ರಚಾರದ ಒಳಸಂಚು ರೂಪಿಸಿದವರ ತನಿಖೆಯಾಗಲಿ Dharmasthala case: Those who hatched the conspiracy to spread slander should be investigated

ಧರ್ಮಸ್ಥಳ ಪ್ರಕರಣ: ಅಪಪ್ರಚಾರದ ಒಳಸಂಚು ರೂಪಿಸಿದವರ ತನಿಖೆಯಾಗಲಿ 

ಯರಗಟ್ಟಿ 11: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. 

ಅಸಂಖ್ಯ ಭಕ್ತರನ್ನು ಹೊಂದಿರುವ ಹಿಂದೂ ಧರ್ಮೀಯರ ಪಾಲಿನ ಪುಣ್ಯ ಕ್ಷೇತ್ರಕ್ಕೆ ಕಳಂಕ ತರಲು ಗೀರೀಶ ಮಟ್ಟಣ್ಣನವರ, ಮಹೇಶ ಶೆಟ್ಟಿ ತಿಮರೋಡಿ, ಟಿ. ಜಯಂತ್, ಯೂಟ್ಯೂಬರ್ ಸಮೀರ್ ಹಾಗೂ ಇವರಿಗೆ ಬೆಂಗಾವಲಾಗಿ ನಿಂತಿರುವವರು ಸೇರಿ ಒಳಸಂಚು ನಡೆಸಿರುವ ಸಾಧ್ಯತೆ ಇದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. 

ಭಕ್ತಾಭಿಮಾನಿ ವೇದಿಕೆಯ ಪ್ರಮುಖ ಜೆ. ರತ್ನಾಕರ ಶೆಟ್ಟಿ ಮಾತನಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಗೊಳಿಸಲು ದೊಡ್ಡಮಟ್ಟದ ಷಡ್ಯಂತ್ರವೊಂದು ನಡೆದಿದೆ. ಅದರ ಭಾಗವಾಗಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪ ಹೊರಿಸಿ, ಕ್ಷೇತ್ರದ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ ಎಂದರು. 

ಹನುಮಂತ ಗೌಡ ಬೆಳಂಬಾರ ಸುಳ್ಳು ಆರೋಪಗಳಿಗೆ ಸರ್ಕಾರ ಬೆಲೆ ಕೊಡಬಾರದು. ಇಂಥ ಆರೋಪಗಳ ಹಿಂದಿನ ಷಡ್ಯಂತ್ರ ಏನು ಎಂಬುದನ್ನು ಬಯಲಿಗೆ ಎಳೆಯಬೇಕು ಎಂದು ಒತ್ತಾಯಿಸಿದರು. 

ರಾಜೇಂದ್ರ ಶೆಟ್ಟಿ ಮಾತನಾಡಿ ಭಕ್ತರ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಕುಟುಂಬ ಸ್ವಸಹಾಯ ಸಂಘದ ಮೂಲಕ ಧರ್ಮಾತೀತ, ಜಾತ್ಯತೀತವಾಗಿ ಸಹಾಯ ಮಾಡಿದೆ. ಆದರೆ, ಅನಾಥ ಶವಗಳ ವಿಚಾರ ಮುಂದಿಟ್ಟು ಅವರ ಕುಟುಂಬದ ಘನತೆಗೆ ಧಕ್ಕೆ ತರುವ ಕೆಲಸ ನಡೆದಿದೆ ಎಂದರು. 

ವೇದಿಕೆ ಪ್ರಮುಖರಾದ ಭಾಸ್ಕರ ಹಿರೇಮೆತ್ರಿ, ಕುಮಾರ ಹಿರೇಮಠ, ಸೋಮಶೇಖರ ಮಗದುಮ ನಾಗಲಿಂಗ ಪೊಜದಾರ, ಈಶ್ವರ ಕರಿಕಟ್ಟಿ, ಗೋಪಾಲ ಕಡೇಮನಿ, ಚೇತನ ಜಕಾತಿ, ಕೃಷ್ಣಮೂರ್ತಿ ತೋರಗಲ್, ಆನಂದ ಬಾಗೋಡಿ, ಸಂತೋಷ ವಾಲಿ, ಗೋವಿಂದ ಪೂಜೇರ, ಪ್ರವೀಣ ಬೆಣ್ಣಿ, ಶಿವನಾಯ್ಕ ಬೂದಿಗೊಪ್ಪ, ವೆಂಕಟೇಶ ಹುರಕನವರ, ಚಂದ್ರಶೇಖರ ಸವದತ್ತಿ, ಸೋಮು ರೈನಾಪೂರ, ಫಕ್ಕೀರ​‍್ಪ ತಳವಾರ, ಗೀತಾ ಹಟ್ಟಿ, ಮಂಜುಳಾ ಕುಂಬಾರಗಿರಿಮಠ, ವಿಜಯಲಕ್ಷ್ಮಿ ನರಗುಂದ, ವಿಜಯಾ ಮಾಸರಡ್ಡಿ, ಹೇಮಾವತಿ ಗೋರವನಕೊಳ್ಳ, ಜಯಶ್ರೀ ಕುಂಬಾರ, ಶೈಲಾ ಈಳಗೇರಿ, ನಿರ್ಮಲಾ ಕುಂಬಾರ, ಮಹಾದೇವಿ ಪೂಜೇರ, ಭೀರವ್ವ ಅಡಕಲಗುಂಡಿ, ಅನಿತಾ ಪೂಜೇರ, ಸವಿತಾ ಬನ್ನೂರ, ಸುಮಿತ್ರಾ ಮುರಗೋಡ, ಇದ್ದರು. 

ಆರೋಪ ಹೊರಿಸುವವರ ತನಿಖೆಗೆ ಒತ್ತಾಯ:‘ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿರಂತರ ಆರೋಪ ಹೊರಿಸುತ್ತಿರುವವರ ಬಗ್ಗೆಯೂ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು. ಅವರ ಖಾತೆಗಳಿಗೆ ದೊಡ್ಡ ಮೊತ್ತದ ಹಣ ಸಂದಾಯವಾಗಿದೆ ಎಂಬ ದೂರುಗಳಿದ್ದು ಈ ಮೂಲಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಅವರಿಗೆ ಮೂಲಕ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.