ಬಿಎಸ್‌ಎನ್‌ಎಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್‌ನನ್ನು ಸೇವೆಯಿಂದ ಅಮಾನತ್ತುಗೊಳಿಸಲು ಆಗ್ರಹ

ಬಿಎಸ್‌ಎನ್‌ಎಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್‌ನನ್ನು ಸೇವೆಯಿಂದ ಅಮಾನತ್ತುಗೊಳಿಸಲು ಆಗ್ರಹ Demand to suspend BSNL Deputy General Manager from service

ಲೋಕದರ್ಶನ ವರದಿ 

ವಿಜಯಪುರ 07: ಕೇಂದ್ರ ಸರ್ಕಾರದ ಬಿ.ಎಸ್‌.ಎನ್‌.ಎಲ್ ಕಚೇರಿಯಲ್ಲಿ ವಯಕ್ತಿಕ ಹುಟ್ಟುಹಬ್ಬ ಆಚರಣೆ ಮಾಡಿದ್ದಲ್ಲದೆ ಡಾ. ಬಿ.ಆರ್‌.ಅಂಬೇಡ್ಕರರವರಿಗೆ ಅಪಮಾನ ಮಾಡಿದ್ದು ಕ್ರಮ ಕೈಗೊಳ್ಳುಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಹಾಗೂ ಮುಖ್ಯ ಪ್ರಧಾನ ವ್ಯವಸ್ಥಾಪಕರು ಬಿ.ಎಸ್‌.ಎನ್‌.ಎಲ್‌. ಬೆಂಗಳೂರು ಇವರಿಗೆ ರೈತಪರ ಸಂಘಟನೆ ಹಾಗೂ ದಲಿತ ಸಂಘಟನೆ ಆಮ್ ಆದ್ಮಿ ಪಕ್ಷದವತಿಯಿಂದ ಮನವಿ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಆಮ್‌.ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೊಲ್ಲಾಪುರ ಮಾತನಾಡಿ,

ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿಜಯಪುರ ನಗರದ ಬಿ.ಎಸ್‌.ಎನ್‌.ಎಲ್ ಕಛೇರಿಯಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಅವರು ತಮ್ಮ ಹುಟ್ಟು ಹಬ್ಬವನ್ನು ಸರ್ಕಾರಿ ಕಛೇರಿಯಲ್ಲಿ ಆಚರಿಸಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಅಲ್ಲದೇ, ಡಾ, ಬಿ.ಆರ್‌.ಅಂಬೇಡ್ಕರ ಜಯಂತಿಯಂದು ಡಾ. ಬಿ.ಆರ್‌.ಅಂಬೇಡ್ಕರ ಭಾವಚಿತ್ರವನ್ನು ಕಛೇರಿಯ ಪುಟ್‌ಪಾತ ಬಳಿ ಇರಿಸಿ ಪೂಜೆ ಮಾಡಿ ಡಾ. ಬಿ.ಆರ್‌.ಅಂಬೇಡ್ಕರರವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಸೇವೆಯಿಂದ ಖಾಯಂ ಆಗಿ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಹೋರಾಟಗಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಇವರಿಗೆ ಹಾಗೂ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ನಂತರ ಬಿ.ಎಸ್‌.ಎನ್‌.ಎಲ್‌. ಕಛೇರಿಗೆ ತೆರಳಿ ಅಲ್ಲಿಯೂ ಕೂಡಾ ಪ್ರತಿಭಟನೆ ನಡೆಸಲಾಯಿತು.  

ಈ ಸಂದರ್ಭದಲ್ಲಿ ಬಿ.ಎಸ್‌.ಎನ್‌.ಎಲ್ ಕಛೇರಿಯ ಡಿ.ಜಿ.ಎಮ್ ಅವರು ಒಂದು ಜವಾಬ್ದಾರಿ ಸ್ಥಾನದಲ್ಲಿದ್ದು ತಮ್ಮ ಜನ್ಮ ದಿನವನ್ನು ಅದೇ ಬಿ.ಎಸ್‌.ಎನ್‌.ಎಲ್ ಕಛೇರಿಯಲ್ಲಿರುವ ಎ.ಸಿ ಹೊಂದಿರುವ ಸಭಾಂಗಣದಲ್ಲಿ ಜನ್ಮ ದಿನ ಆಚರಣೆ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಆದರೆ ದೇಶದ ಸಂವಿಧಾನದ ಪಿತಾಮಹ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾಽಽ ಬಿ.ಆರ್‌.ಅಂಬೇಡ್ಕರವರ ಜನ್ಮ ದಿನವನ್ನು ಕೆಳಗಡೆ ಪುಟ್‌ಪಾತ ಬಳಿ ಆಚರಣೆ ಮಾಡಿದ್ದಾರೆ. ಇವರದು ಡಾಽಽ ಬಿ.ಆರ್‌.ಅಂಬೇಡ್ಕರರ ವಿರೋಧಿ ಮನಸ್ಥಿತಿ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ತಮ್ಮ ವಯಕ್ತಿಕ ಹುಟ್ಟು ಹಬ್ಬವನ್ನು ಸರ್ಕಾರಿ ಕಛೇರಿಯಲ್ಲಿ ಮಾಡಿರುವುದು ಎಷ್ಟೊಂದು ಸರಿ. ಇವರು ಮುಂದೆ ಇದೇ ರೀತಿ ತಮ್ಮ ವಯಕ್ತಿಕ ಮನೆಯ ಕಾರ್ಯಕ್ರಮಗಳನ್ನು ಕೂಡಾ ಇದೆ ಬಿ.ಎಸ್‌.ಎನ್‌.ಎಲ್ ಕಛೇರಿಯಲ್ಲಿ ಮಾಡಿದರು ಕೂಡಾ ಆಶ್ಚರ್ಯಪಡಬೇಕಾಗಿಲ್ಲ.

ಇಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಡಾಽಽ ಬಿ.ಆರ್‌.ಅಂಬೇಡ್ಕರರವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ದೇಶದ ಸಕಲರಿಗೂ ಸಮಾನಾಂತರವಾದ ಸಂವಿಧಾನವನ್ನು ಕರುಣಿಸಿದ್ದಾರೆ. ಇಂತಹ ಮಹಾತ್ಮರಿಗೆ ಇಂತಹ ಅಧಿಕಾರಿಗಳಿಂದ ಅಪಮಾನ ಮಾಡುವುದನ್ನು ಸಮಾಜ ಸಹಿಸುವದಿಲ್ಲ. ಕಾರಣ ಇಂತವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ಇವರನ್ನು ಶಾಶ್ವತವಾಗಿ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂಧರ್ಭದಲ್ಲಿ ಆಮ್‌. ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೊಲ್ಲಾಪುರ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸಿದ್ದಾಪೂರ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಬಸವರಾಜ ಭೈರವಾಡಗಿ, ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಟಗಿ, ಕಿರಣ ಮೇಲಿನಕೇರಿ ಮುಂತಾದವರು ಇದ್ದರು.