ವಾಲ್ಮೀಕಿ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಜಿಲ್ಲಾಡಳಿತಕ್ಕೆ ಮನವಿ

ವಾಲ್ಮೀಕಿ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಜಿಲ್ಲಾಡಳಿತಕ್ಕೆ ಮನವಿ Demand for fulfillment of Valmiki community's demands: Memorandum submitted to district administrat

ಲೋಕದರ್ಶನ ವರದಿ 

ಬೆಳಗಾವಿ 01 : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವಘಟಕ (ರಿ) ವತಿಯಿಂದ ಕಾಳೇನಟ್ಟಿ ಹಾಗೂ ಅಂಕಲಗಿ ಗ್ರಾಮಗಳ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಕಾಳೇನಟ್ಟಿ ಗ್ರಾಮಕ್ಕೆ ಸ್ಮಶಾನ ಭೂಮಿ, ವಾಲ್ಮೀಕಿ ಸಮುದಾಯ ಭವನ ಹಾಗೂ ಕನ್ನಡ ಶಾಲೆಯ ಮಕ್ಕಳ ಆಟದ ಮೈದಾನಕ್ಕಾಗಿ ಸೂಕ್ತ ಜಾಗವನ್ನು ಮಂಜೂರು ಮಾಡುವಂತೆಒತ್ತಾಯಿಸಲಾಯಿತು. ಅದೇ ರೀತಿ ಅಂಕಲಗಿ ಗ್ರಾಮದಲ್ಲಿ ಸುಮಾರು 15 ವರ್ಷಗಳ ಹಿಂದೆ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ, ಇದುವರೆಗೆ ಪೂರ್ಣಗೊಂಡಿಲ್ಲ.

ಹೀಗಾಗಿ ಅಪೂರ್ಣಗೊಂಡಿರುವ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಸಾಧ್ಯವಾಗದಿದ್ದಲ್ಲಿ ಹೊಸ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಬೆಳಗಾವಿ ಉಪವಿಭಾಗಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸಿ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದುಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್‌ಎಸ್‌. ಶೀಗಿಹಳ್ಳಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ತಾಲೂಕುಅಧ್ಯಕ್ಷ ಮಂಗೇಶ್ ಚನ್ನಿಕುಪ್ಪಿ, ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ, ಅಂಕಲಗಿ ಗ್ರಾಮಘಟಕದ ಅಧ್ಯಕ್ಷ ಮಂಜು ಹೊಳೆಪ್ಪಗೋಳ ಸೇರಿದಂತೆ ಅಂಕಲಗಿ ಹಾಗೂ ಕಾಳೇನಟ್ಟಿ ಗ್ರಾಮಘಟಕದ ಪದಾಧಿಕಾರಿಗಳು, ಯುವಕರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.