ದಾಸ ಸಾಹಿತ್ಯ ಬದುಕಿನ ಮೌಲ್ಯವನ್ನು ಹೆಚ್ಚಿಸುತ್ತದೆ ಎಸ್. ಎಮ್. ಕುಲಕರ್ಣಿ
ಬೆಳಗಾವಿ 25: ದಾಸ ಸಾಹಿತ್ಯವು ಬದುಕಿನ ಮೌಲ್ಯವನ್ನು ಹೆಚ್ಚಿಸುತ್ತದೆ. ಬದುಕುವ ದಾರಿಯನ್ನು ಹೇಳಿಕೊಡುತ್ತದೆ. ಮಕ್ಕಳಲ್ಲಿ ದಾಸರ ಪದಗಳ ಹಾಡುಗಾರಿಕೆಯನ್ನು ಪ್ರೋತ್ಸಾಹಿಸುವ ಮತ್ತು ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ. ಎನ್ ಜಿ ಲೋಕೂರ ದತ್ತಿನಿಧಿಯ "ದಾಸರ ಪದಗಳ ಸ್ಪರ್ಧೆ"ಯನ್ನು ನಾವು ಹಲವಾರು ವರ್ಷಗಳಿಂದ ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದು ಖ್ಯಾತ ನ್ಯಾಯವಾದಿ, ಪ್ರತಿಷ್ಠಾನದ ಅಧ್ಯಕ್ಷ ಎಸ್ ಎಂ ಕುಲಕರ್ಣಿಯವರು ಇಂದಿಲ್ಲಿ ಹೇಳಿದರು. ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ಎನ್ ಜಿ ಲೋಕೂರ ದತ್ತಿನಿಧಿ " ದಾಸರ ಪದಗಳ ಸ್ಫರ್ಧೆ" ಯನ್ನು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಿನ್ನೆ ದಿ. 24 ರವಿವಾರದಂದು ಹಮ್ಮಿಕೊಂಡಿದ್ದರು.
ಸಸಿಗೆ ನೀರೆರದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಲಕರ್ಣಿಯವರು ಮಾತನಾಡುತ್ತ ಮೇಲಿನಂತೆ ಹೇಳಿದರು. ಮುಂದೆ ಮಾತನಾಡುತ್ತ ಕುಲಕರ್ಣಿಯವರು ಮೊದ ಮೊದಲು ಬೆರಳೆಣಿಕೆಷ್ಟು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕಳೆದೆರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳುತ್ತಿರುವುದನ್ನು ಗಮನಿಸಿದಾಗ ಮಕ್ಕಳ ಒಲವನ್ನು ದಾಸರ ಹಾಡುಗಾರಿಕೆಯತ್ತ ಸೆಳೆಯುವಲ್ಲಿ ಪ್ರತಿಷ್ಠಾನ ಯಶಸ್ವಿಯಾಗಿದೆ ಎಂದು ಹೇಳಿದರು.
‘ದಾಸರ ಪದಗಳ ಗಾಯನ ಸ್ಪರ್ಧೆಯಲ್ಲಿ ಬೆಳಗಾವಿಯ ಗೋಮಟೇಶ ಪ್ರೌಢಶಾಲೆ ವಿದ್ಯಾರ್ಥಿ ಸಾತ್ವಿಕ್ ಭಂಡಾರಿ (ಪ್ರಥಮ) , ಸೇಂಟ್ ಜೊಸೇಫ್ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾ ದೇಸಾಯಿ (ದ್ವಿತೀಯ), ಜ್ಞಾನಪ್ರಮೋದಿನಿ ಮಂದಿರದ ವಿದ್ಯಾರ್ಥಿನಿ ಧನ್ಯಾ ಪಾಟೀಲ (ತೃತೀಯ) ಸ್ಥಾನ ಪಡೆದುಕೊಂಡರು. ಶ್ರೀಮತಿ ಅಪೂರ್ವ ಕರಿಕಟ್ಟಿ ಮತ್ತು ಶ್ರೀಮತಿ ವೀಣಾ ಶೆಟ್ಟಿ ತೀಪುಗಾರರಾಗಿ ಆಗಮಿಸಿದ್ದರು. ತೀಪುಗಾರರ ಪರವಾಗಿ ಮಾತನಾಡಿದ ವೀಣಾ ಶೆಟ್ಟಿ ಇವರು ಸ್ಪರ್ಧಿಗಳು ರಾಗ, ತಾಳ, ಭಾವ, ಉಚ್ಛಾರ ಎಲ್ಲದರತ್ತ ಹೆಚ್ಚಿನ ಗಮನ ಕೊಡಬೇಕು. ಸಂಗೀತಾಭ್ಯಾಸದೊಂದಿಗೆ ಬೇರೆಯವರ ಸಂಗೀತವನ್ನು ಕೇಳುವದನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಮುಂದೆ ಮಾತನಾಡುತ್ತ ಶೆಟ್ಟಿಯವರು ಇಂದು ಈ ಸ್ಪರ್ಧೆಯು ನಮ್ಮ ಸನಾತನ ಧರ್ಮವನ್ನು ಉಳಿಸುವ, ಬೆಳೆಸುತ್ತಿರುವ ಅಲ್ಲದೇ ದಾಸಸಾಹಿತ್ಯವನ್ನು ಪ್ರಚಾರ ಪಡಿಸುತ್ತಿರುವ ಪ್ರತಿಷ್ಠಾನದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ನೀರಜಾ ಗಣಾಚಾರಿ, ಎನ್.ಬಿ. ದೇಶಪಾಂಡೆ, ಮೋಹನ ಗುಂಡ್ಲೂರ, ರಾಮಚಂದ್ರ ಕಟ್ಟಿ, ಮಧುಕರ ಗುಂಡೇನಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಸಂಜೀವ ಕುಲಕರ್ಣಿ ನಿರೂಪಿಸಿದರು.
ಹಿರಿಯ ನ್ಯಾಯವಾದಿ ಎಸ್ ಎಂ ಕುಲಕರ್ಣಿಯವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು