ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಕಾರ್ಯಗಾರದಲ್ಲಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆರೈತರು ಸಿರಿಧಾನ್ಯ ಬೆಳೆಯಲು ಮುಂದಾಗಬೇಕು

DC Prashant Kumar Mishra in the district level cereal workshop farmers should take initiative to gr

ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಕಾರ್ಯಗಾರದಲ್ಲಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆರೈತರು ಸಿರಿಧಾನ್ಯ ಬೆಳೆಯಲು ಮುಂದಾಗಬೇಕು

ಬಳ್ಳಾರಿ 21: ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರು ಸಿರಿಧಾನ್ಯ ಬೆಳೆಯಲು ಆಸಕ್ತಿ ವಹಿಸಬೇಕು. ಸಿರಿಧಾನ್ಯ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣಾ ಘಟಕಗಳ ಸ್ಥಾಪನೆ ಸೇರಿದಂತೆ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸರ್ಕಾರಿ (ಮುನಿಸಿಪಲ್) ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರವನ್ನು ಸಿರಿಧಾನ್ಯಗಳ ರಾಶಿಗೆ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ಮಳೆಯ ಕೊರತೆ ಹೆಚ್ಚು ಕಂಡುಬರುತ್ತಿದೆ. ಅದಕ್ಕಾಗಿ ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಪದ್ದತಿ ಅಳವಡಿಸಿಕೊಳ್ಳಬೇಕು. ತುಂಗಭದ್ರಾ ಅಚ್ಚುಕಟ್ಟು  ಪ್ರದೇಶದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದಾರೆ. ಭತ್ತದ ಜತೆಗೆ ಸಿರಿಧಾನ್ಯ ಬೆಳೆಗಳಾದ ಸಜ್ಜೆ, ನವಣೆ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಸಹ  ಬೆಳೆಯಬೇಕು ಎಂದರು. 

ಸಿರಿಧಾನ್ಯಗಳ ಬಗ್ಗೆ ಮಹಾನಗರಗಳಲ್ಲಿನ ಸಾರ್ವಜನಿಕರು ಹೆಚ್ಚು ಅರಿವು ಹೊಂದಿದ್ದಾರೆ. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಯುತ ಜೀವನಕ್ಕೆ ಸಾಕಷ್ಟು ಪ್ರಯೋಜನೆಗಳು ಇವೆ ಎಂದು ತಿಳಿಸಿದರು.ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊದಲೇ ನಮ್ಮ ಪೂರ್ವಜರು ಸಿರಿಧಾನ್ಯಗಳ ಮಹತ್ವ ಅರಿತುಕೊಂಡಿದ್ದರು. ಹಾಗಾಗಿ ಅವರು ಸಿರಿಧಾನ್ಯಗಳ ಸೇವನೆಯಿಂದ ಗಟ್ಟಿ ಮುಟ್ಟಾಗಿ ಸದೃಢ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಈಗ ಕಲಬೆರಕೆ ಆಹಾರ ಸೇವನೆಯಿಂದ ಅನೇಕ ರೀತಿಯ ರೋಗಗಳು ಬರುತ್ತಿವೆ. ದೈನಂದಿನ ಆಹಾರ ಪದ್ಧತಿಯಲ್ಲಿ ನಾವೆಲ್ಲರೂ ಸಿರಿಧಾನ್ಯಗಳ ಬಳಸಿಕೊಂಡು ಆರೋಗ್ಯವಂತರಾಗೋಣ ಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮಾತನಾಡಿ, 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಯಿತು. ಸಿರಿಧಾನ್ಯಗಳ ಮಹತ್ವವನ್ನು ಸಾರ್ವಜನಿಕರಲ್ಲಿ ಇನ್ನು ಹೆಚ್ಚು ಹೆಚ್ಚು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆಯಿಂದ ರೋಗ-ರುಜಿನಗಳು ಹೆಚ್ಚಾಗಿ ಕಂಡು ಬರುತ್ತಿವೆ. ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳ್ಳಬಹುದು ಎಂದು ಹೇಳಿದರು.ಜಂಟಿ ಕೃಷಿ ನಿರ್ದೇಶಕ ಸೋಮಸುಂದರ ಕೆ.ಎಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ 142 ಕೋಟಿ ಜನಸಂಖ್ಯೆ ಇದೆ. 332 ಮಿಲಿಯನ್ ಟನ್‌ನಷ್ಟು ಆಹಾರ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬನೆ ಆಗಿದ್ದೇವೆ. ಮುಂದಿನ 5 ವರ್ಷಗಳವರೂ ಪ್ರತಿಯೊಬ್ಬರಿಗೆ ಒದಗಿಸುವಷ್ಟು ಆಹಾರ ನಮ್ಮಲ್ಲಿದೆ. ಆದರೆ ಪೋಷಕಾಂಶಯುಕ್ತ ಆಹಾರ ಸಿಗುತ್ತಿಲ್ಲ ಎಂದರು.ಸಿರಿ ಎಂದರೆ ಸಂಪತ್ತು. ಅಂತಹ ಸಿರಿಧಾನ್ಯಗಳಾದ ಸಾಮೆ, ನವಣೆ, ರಾಗಿ, ಸಜ್ಜೆ, ಊದಲು  ಪೌಷ್ಠಿಕಯುಕ್ತವಾಗಿದೆ.  ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ಉಪಯುಕ್ತವಾಗಿವೆ. ಸಿರಿಧಾನ್ಯ ಬೆಳೆ ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ರೈತರು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು. 

ಇದೇ ವೇಳೆ ಗಣ್ಯರು ಸಿರಿಧಾನ್ಯ ಬೆಳೆಗಳ ಉತ್ಪಾಧನಾ ತಾಂತ್ರಿಕತೆ ಮತ್ತು ಅವುಗಳ ಮೌಲ್ಯವರ್ಧನೆ ಕುರಿತ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು. ಬಳಿಕ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ರಾಮಪ್ಪ.ಕೆ.ಟಿ ಅವರು ವಿಶೇಷ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜ ಉಪಾಧ್ಯಕ್ಷರಾದ ಎಸ್‌.ಕೆ.ವಿಶಾಲಾಕ್ಷಿ, ರಾಜ್ಯ ಪ್ರತಿನಿಧಿ ಕೃಷಿಕ ಸಮಾಜದ ಸುರೇಶ ನಂದಿ, ಉಪ ಕೃಷಿ ನಿರ್ದೇಶಕ ಮಂಜುನಾಥ ಎಸ್‌.ಎನ್‌., ಸಹಾಯಕ ಕೃಷಿ ನಿರ್ದೇಶಕ ದಯಾನಂದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಎಲ್ಲಾ ರೈತ ಮತ್ತು ಇತರೆ ಸಂಘ-ಸಂಸ್ಥೆಗಳು, ಪ್ರಗತಿ ಪರ ರೈತರು ಮತ್ತು ಮಹಿಳಾ ರೈತರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು. 

*40 ಸೆಳೆದ ಉತ್ಪನ್ನ, ವಿವಿಧ ಪರಿಕರ ಮಳಿಗೆಗಳು:* 

ಅಂತರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳದ ಅಂಗವಾಗಿ ಮುನಿಸಿಪಲ್ ಕಾಲೇಜ್ ಮೈದಾನದ ಆವರಣದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳ ಮಳಿಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ವಿವಿಧ ಕೃಷಿ ಪರಿಕರಗಳ ಮಳಿಗೆಗಳು ಸೇರಿದಂತೆ ಒಟ್ಟು 40 ಮಳಿಗೆಗಳು ಹಾಕಲಾಗಿತ್ತು. ಕೃಷಿ ಮತ್ತು ತೋಟಗಾರಿಕೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ನೀಡಲಾಯಿತು.