ಬೆಳೆ ಹಾನಿ: ವೈಜ್ಞಾನಿಕ ಸಮೀಕ್ಷೆಗೆ ನಡಹಳ್ಳಿ ಆಗ್ರಹ

ಬೆಳೆ ಹಾನಿ: ವೈಜ್ಞಾನಿಕ ಸಮೀಕ್ಷೆಗೆ ನಡಹಳ್ಳಿ ಆಗ್ರಹ Crop damage: Nadahalli demands scientific survey

ಬೆಳೆ ಹಾನಿ: ವೈಜ್ಞಾನಿಕ ಸಮೀಕ್ಷೆಗೆ ನಡಹಳ್ಳಿ ಆಗ್ರಹ 

ದೇವರಹಿಪ್ಪರಗಿ 15: ಈ ಭಾಗದಲ್ಲಿ ಅತಿವೃಷ್ಟಿ ಮತ್ತು ಡೋಣಿ ಪ್ರವಾಹದಿಂದ ಆಗಿರುವ ಬೆಳೆಹಾನಿ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ವಾಸ್ತವ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸುವಂತೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಆಗ್ರಹಿಸಿದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಹಿಪ್ಪರಗಿ, ಕಲಕೇರಿ ಹಾಗೂ ತಾಳಿಕೋಟಿ ಹೋಬಳಿ ಮಟ್ಟದಲ್ಲಿ ಮೂರು ತಿಂಗಳಿಂದ ನಿರಂತರ ಹಾಗೂ ವಾಡಿಕೆಗಿಂತ ಶೇ.60-70 ಅಧಿಕ ಮಳೆ, ಡೋಣಿ ಪ್ರವಾಹದಿಂದ ಹಿಂದೆಂದೂ ಆಗಿರದಷ್ಟು ಅಂದಾಜು 50ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಬೆಳೆ ಹಾನಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದೆ. ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಂಡಿಲ್ಲ. ಪರಿಹಾರವನ್ನೂ ನೀಡಿಲ್ಲ. ಅಲ್ಲದೇ, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಕೇಂದ್ರದಿಂದ ಬರುವ ಎನ್‌ಡಿಆರ್‌ಎಫ್ ಹಾಗೂ ಬೆಳೆ ವಿಮೆ ಮೊತ್ತವು ರೈತರ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.  

ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೆ ರೂ. 31ಸಾವಿರ ಕೋಟಿ ರೂ.ಪರಿಹಾರದ ಪ್ಯಾಕೇಜ ಹಾಗೂ ಪ್ರತಿ ಹೆಕ್ಟೇರ್‌ಗೆ ರೂ. 48 ಸಾವಿರ ಪರಿಹಾರ ನೀಡುತ್ತಿದೆ.ಅದೇ ರೀತಿ ನಮ್ಮ ರೈತರಿಗೂ ಕನಿಷ್ಠ ಹೆಕ್ಟೇರ್‌ಗೆ ರೂ. 25 ಸಾವಿರ ಪರಿಹಾರ ಕೊಡಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರ​‍್ಪ ನೇತೃತ್ವದ ಬಿಜೆಪಿ 2009 ಹಾಗೂ 2020ರ ಸರ್ಕಾರದ ಅವಧಿಯಲ್ಲಿ ಜನರು ಹಾಗೂ ರೈತರಿಗೆ ಸ್ಪಂದಿಸಿ ತಕ್ಷಣ ಪರಿಹಾರ ಒದಗಿಸುವ ಕೆಲಸ ಸಹ ನಡೆದಿತ್ತು.ಇತ್ತೀಚಿನ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಹಾಗೂ ಸಚಿವರು ರೈತರಿಗೆ ಸ್ಪಂದಿಸದೆ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರೈತ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.