ಕ್ಷಯ ರೋಗ ತಡೆಗೆ ಜಾಗೃತಿ ಮೂಡಿಸಿ ಕ್ಷಯ ಮುಕ್ತ ಜಿಲ್ಲೆಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಿ

Create awareness for the prevention of tuberculosis and work in coordination for a tuberculosis fre

ಕ್ಷಯ ರೋಗ ತಡೆಗೆ ಜಾಗೃತಿ ಮೂಡಿಸಿ ಕ್ಷಯ ಮುಕ್ತ  ಜಿಲ್ಲೆಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಿ 

ಹಾವೇರಿ 02: ಕ್ಷಯ ಗಂಭೀರ ಖಾಯಿಲೆಯಾಗಿದ್ದು,  ಜಿಲ್ಲೆಯಲ್ಲಿ ಕ್ಷಯ ರೋಗ ತಡೆಗೆ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸಬೇಕು. ಜೊತೆಗೆ ಕ್ಷಯ ಮುಕ್ತ ಜಿಲ್ಲೆಗೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಕ್ಷಯರೋಗ ಆಂದೋಲನ ಕುರಿತ ವಿಶೇಷ ಜಿಲ್ಲಾ ಮಟ್ಟದ ಕ್ಷಯರೋಗ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕ್ಷಯರೋಗದ ಲಕ್ಷಣಗಳು ಹಾಗೂ ಕ್ಷಯ ರೋಗ ಗುಣಪಡಿಸಲು ಇರುವ ಸೌಲಭ್ಯಗಳ ಕುರಿತು ನಗರ ಹಾಗೂ ಗ್ರಾಮೀಣ ಭಾಗದ ಜನಸಂದಣಿ ಪ್ರದೇಶಗಳಲ್ಲಿ  ಆರೋಗ್ಯ ಅರಿವು ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು  ಎಂದರು. 

ಕ್ಷಯರೋಗ ಪತ್ತೆ ಶಿಬಿರವನ್ನು ಆಯೋಜಿಸುವ ಮೂಲಕ ಕ್ಷಯ ರೋಗದ ಲಕ್ಷಣಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಕ್ಷಯದಿಂದ ಗುಣಮುಖರಾದವರಿಂದ  ಕ್ಷಯರೋಗಿಗಳಿಗೆ ಅರಿವು ಕಾರ್ಯಕ್ರಮ ಆಯೋಜಿಸಬೇಕು.  ಈ ಕಾರ್ಯಕ್ಕೆ ಸಂಘ-ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬೇಕು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಜೊತೆಗೆ  ಸಾಮಾಜಿಕ ಜಾಲತಣಗಳ ಮೂಲಕ ಕ್ಷಯರೋಗ ತಗಡೆಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.  

ಕ್ಷಯರೋಗಿಗಳಿಗೆ ಅಗತ್ಯವಾದ ಪೌಷ್ಠಿಕ ಆಹಾರದ ಕಿಟ್ ನೀಡಲು ಸಂಘ-ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಸಹ ಕ್ಷಯರೋಗಿಗಳನ್ನು ದತ್ತು ಪಡೆದುಕೊಳ್ಳುವ ಮೂಲಕ ಅವರಿಗೆ ಆರು ತಿಂಗಳ ಕಾಲ ಪೌಷ್ಠಿಕ ಆಹಾರ ಕಿಟ್ ನೀಡಲು ಮುಂದಾಗಬೇಕು ಎಂದು ತಿಳಿಸಿದರು.  

ಎಚ್‌.ಐ.ವಿ. ಸೋಂಕಿತರು ಹಾಗೂ ಬಾಧಿತರಿಗೆ  ಅಗತ್ಯ ಸೇವೆಗಳನ್ನು ಆದ್ಯತೆ ಮೇರೆಗೆ ನೀಡಬೇಕು. ಆಸ್ಪತ್ರೆಗಳಲ್ಲಿ ಅವರಿಗೆ ಅಗತ್ಯ ಓಷಧೋಪಚಾರ ಹಾಗೂ ಚಿಕಿತ್ಸೆ ನೀಡಬೇಕು. ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು. ಎಚ್‌.ಐ.ವಿ. ಸೋಂಕು ಹರಡಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಖಾರಿ ಡಾ.ನೀಲೇಶ ಎಂ.ಎನ್‌. ಅವರು ಮಾತನಾಡಿ, ಈಗಾಗಲೇ ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮದಡಿ  ಶತದಿನದ ಟಿಬಿ ಆಂದೋಲನ ಡಿಸೆಂಬರ 7 ರಿಂದ ಬರುವ  ಮಾರ್ಚ್‌ 17ರವರೆಗೆ   ಹಮ್ಮಿಕೊಳ್ಳಲಾಗಿದೆ.  ಈ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ಹೋಗಿ ಕ್ಷಯ ರೋಗಿಗಳನ್ನು ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಯರೋಗದ  ಲಕ್ಷಣಗಳು, ಚಿಕಿತ್ಸೆ ಕ್ರಮಗಳು,  ಸಹಾಯಧನ  ಸೇರಿದಂತೆ ವಿವಿಧ ಮಾಹಿತಿಗಳ ಕುರಿತು  ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ನಿ-ಕ್ಷಯ್ ಸಹಾಯವಾಣಿ 1800-11-6666 ಟೋಲ್ ಫ್ರೀ ಸಂಖ್ಯೆ ಸಂಪರ್ಕಿಸಲು ಸಹ ಅರಿವು ಮೂಡಿಸಲಾಗುತ್ತಿದೆ ಎಂದರು. 

ಜನವರಿ 16 ರಿಂದ 24ರವರೆಗೆ  ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಶಿಬಿರ, ನಿ-ಕ್ಷಯ್ ಸಪ್ತಾಹವನ್ನು ಜನವರಿ 27 ರಿಂದ  ಫೆಬ್ರುವರಿ 2ರವರೆಗೆ  ಎಲ್ಲ ಇಲಾಖೆಗಳಲ್ಲಿ ಆಯೋಜಿಸಲಾಗುತ್ತಿದೆ.  ಫೆ.3 ರಿಂದ 15ರವರೆಗೆ ನಿ-ಕ್ಷಯ್ ಸರ್ವಿಸ್ ಇನ್ ವರ್ಕ್‌ ಪ್ಲೆಸ್,  ಫೆ.15 ರಿಂದ 28ರವರೆಗೆ  ಮಾಧ್ಯಮದವರಿಗೆ ಕಾರ್ಯಾಗಾರ,  ಪ್ರದೇಶ ಭೇಟಿ ಹೀಗೆ ಮಾರ್ಚ್‌ 17ರವರೆಗೆ ವಿವಿಧ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.  

ಜನೇವರಿ  2024 ರಿಂದ ನವೆಂಬರ್ -2024ರವರೆಗೆ 1585 ಕ್ಷಯರೋಗಿಗಳನ್ನು ಪತ್ತೆಹಚ್ಚಲಾಗಿದ್ದು, ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.  ಕಳೆದ 2023ನೇ ಸಾಲಿನಲ್ಲಿ 1780 ಕ್ಷಯರೋಗಿಗಳನ್ನು ಪತ್ತೆಹಚ್ಚಿ ಅಗತ್ಯ ಚಿಕಿತ್ಸೆ ನೀಡಲಾಗಿದೆ.  ಕಳೆದ ಸಾಲಿನಲ್ಲಿ 135 ಜನರು ಮರಣಹೊಂದಿದ್ದಾರೆ ಎಂದರು. 

ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಕಾರ್ಯಕ್ರಮದಡಿ ಏಡ್ಸ್‌ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಏಡ್ಸ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಏಪ್ರಿಲ್‌-24 ರಿಂದ ನವೆಂಬರ್ -24ರವರೆಗೆ 73,408 ಜನರನ್ನು ತಪಾಸಣೆ ಮಾಡಲಾಗಿದ್ದು, ಈ ಪೈಕಿ 149 ಜನರಲ್ಲಿ ಎಚ್‌.ಐ.ವಿ. ಸೋಂಕು ಕಂಡುಬಂದಿದೆ. ಅದೇ ರೀತಿ 28,432 ಗರ್ಭಿಣಿಯರನ್ನು ತಪಾಸಣೆ ಮಾಡಿದ ಐದು ಜನರಲ್ಲಿ ಎಚ್‌.ಐ.ವಿ. ಸೋಂಕು ಕಂಡುಬಂದಿದೆ.  ಸೋಂಕಿತರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ಸಹ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.  

ಜಿಲ್ಲೆಯಲ್ಲಿ ವಸತಿ ಯೋಜನೆಯಡಿ 32 ಎಚ್‌.ಐ.ವಿ.ಸೋಂಕಿತರಿಗೆ ಮನೆ ಮಂಜೂರು ಮಾಡಲಾಗಿದೆ.  ಧನಶ್ರೀ ಯೋಜನೆಯಡಿ 130 ಎಚ್‌.ಐ.ವಿ.ಸೋಂಕಿತರು  ಸಹಾಯಧನ ಸೌಲಭ್ಯ ಪಡೆದುಕೊಂಡಿದಾರೆ.  ವಿಶೇಷ ಪಾಲನಾ ಯೋಜನೆಯಡಿ 814 (ಸೊನ್ನೆಯಿಂದ 18 ವರ್ಷದೊಳಗಿನ) ಎಚ್‌.ಐ.ವಿ. ಸೋಂಕಿತ ಬಾಧಿತ ಮಕ್ಕಳಿಗೆ ಪ್ರತಿ ತಿಂಗಳು ರೂ. ಒಂದು ಸಾವಿರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ ಮಮತಾ ಹೊಸಗೌಡ್ರ,  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ, ಜಂಟಿ ಕೃಷಿ ನಿರ್ದೇಶಕರು, ತಾಲೂಕಾ ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.