ಶಿಕ್ಷಕರಿಗೆ ಸಮನ್ವಯ ಶಿಕ್ಷಣ ಕಾರ್ಯಾಗಾರ ಯಶಸ್ವಿ

ಶಿಕ್ಷಕರಿಗೆ ಸಮನ್ವಯ ಶಿಕ್ಷಣ ಕಾರ್ಯಾಗಾರ ಯಶಸ್ವಿ Coordinated Education Workshop for Teachers Successful

         ಬೆಳಗಾವಿ 22: ಶಿಕ್ಷಕರು ವಿಶೇಷ ಚೇತನ ಮಕ್ಕಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಮತ್ತು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಅವರು ವಿಶೇಷವಾಗಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಬೈಲಹೊಂಗಲ ಬಿಆರ್‌ಸಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಆರ್ ಹೀರೆಮಠ ಅವರು ಕರೆ ನೀಡಿದರು.  

        ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಎಸ್‌ಬಿಐ ಫೌಂಡೇಶನ್ ಸಹಯೋಗದಲ್ಲಿ ದಿ.22ರಂದು ಬೈಲಹೋಂಗಲ ತಾಲೂಕಿನ ಬಿಆರ್‌ಸಿ ಸಭಾ ಭವನದಲ್ಲಿ ಯಶಸ್ವಿಯಾಗಿ ಜರುಗಿದ ಶಿಕ್ಷಕರಿಗಾಗಿ 'ಸಮನ್ವಯ ಶಿಕ್ಷಣ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ಸಮರ್ಥನಂ ಸಂಸ್ಥೆಯ ಗುರಿ-ಉದ್ದೇಶಗಳು ಮತ್ತು ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.   

         ಪ್ರಾಸ್ತಾವಿಕವಾಗಿ ಮಾತನಾಡಿದ ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಾಖಾ ಮುಖ್ಯಸ್ಥ ಅರುಣ್ ಕುಮಾರ್ ಎಂ.ಜಿ. ಅವರು, ಎಸ್‌ಬಿಐ ಫೌಂಡೇಶನ್ ಸಹಯೋಗದಲ್ಲಿ ಸಂಸ್ಥೆಯು ಬೆಳಗಾವಿ ಜಿಲ್ಲೆಯ ಏಳು ತಾಲೂಕುಗಳ 38ಕ್ಕೂ ಹೆಚ್ಚು ಶಾಲೆಗಳಲ್ಲಿ ಸಮಗ್ರ ಶಿಕ್ಷಣದಡಿ ದಿವ್ಯಾಂಗ ಮಕ್ಕಳ ವೈದ್ಯಕೀಯ ತಪಾಸಣೆ, ಸಾಧನ-ಸಲಕರಣೆಗಳ ವಿತರಣೆ, ಪಠ್ಯಪುಸ್ತಕಗಳ ವಿತರಣೆ ಹಾಗೂ ಶಾಲಾ ದುರಸ್ತಿ ಸೇರಿದಂತೆ 10 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು. 

         ಸಮುದಾಯ ಮುಖ್ಯಸ್ಥರಿಗೆ ಬೆಳಗಾವಿ ನಗರದ ಆರ್‌ಟಿಓ ವೃತ್ತದಲ್ಲಿರುವ ಜೀಜಾಮಾತಾ ಶಾಲೆ ಆವರಣದಲ್ಲಿರುವ ವಿಶೇಷ ತರಬೇತಿ ಮತ್ತು ವಿಶೇಷ ಚೇತನ ಮಕ್ಕಳಿಗಾಗಿ ನಿರ್ಮಿಸಲಾದ 'ರಿಸೋರ್ಸ್‌ ಸೆಂಟರ್'ಗೆ ಭೇಟಿ ನೀಡುವಂತೆ ವಿನಂತಿಸಿದರು. ಅಲ್ಲದೆ, ದಿವ್ಯಾಂಗರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿ, ಕ್ರೀಡೆ, ಸಂಗೀತ ಕಾಲೇಜು ಮತ್ತು ವಿವಿಧ ಡಿಪ್ಲೋಮಾ ತರಬೇತಿಗಳ ಬಗ್ಗೆಯೂ ಮಾಹಿತಿ ನೀಡಿದರು. ನಿಮ್ಮ ವ್ಯಾಪ್ತಿಯ ಅಭ್ಯರ್ಥಿಗಳನ್ನು ಸಂಸ್ಥೆಗೆ ಕಳುಹಿಸುವುದರ ಮೂಲಕ ಈ ಸೌಲಭ್ಯಗಳ ಸದುಪಯೋಗ ಪಡೆಯಲು ಸಹಕರಿಸಿ ಎಂದು ಕರೆ ನೀಡಿದರು. 

        ಸಮರ್ಥನಂ ಸಂಸ್ಥೆಯ ಬೆಳಗಾವಿ ಶಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಾ ಇಟಿ ಮತ್ತು ಪಂಡಿತ ಬಿಯವರು, ಅಂಧರು ತಮ್ಮ ಶಿಕ್ಷಣ ಮತ್ತು ದಿನಚರಿಯಲ್ಲಿ ತಾಂತ್ರಿಕ ಸಾಧನಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. 

       ಎಸ್‌ಬಿಐಎಫ್ ಸಂಚಾಲಕ ಶಿವಕುಮಾರ್ ಹಲ್ಯಾಳಿ ಅವರು ಸಮನ್ವಯ ಶಿಕ್ಷಣದ ಮಹತ್ವ, ಅಂಗವಿಕಲತೆ, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಹಾಗೂ 21 ಬಗೆಯ ಅಂಗವಿಕಲತೆಗಳ ಕುರಿತು ವಿಸ್ತೃತ ಮಾಹಿತಿಯನ್ನು ನೀಡಿದರು. 

        ಬೈಲಹೋಂಗಲ ಬಿಇಒ ಗಂಗಾಧರ, ಇಸಿಓ ಕಾಮಕರ, ಬಿಆರ್‌ಪಿ ಪಾಟೀಲ ಸೇರಿದಂತೆ ಶಾಲಾ ಶಿಕ್ಷಕರು, ಹಲವು ಮುಖ್ಯಸ್ಥರು, ಹಾಗೂ ಸಿಬ್ಬಂದಿಗಳಾದ ಪಂಡಿತ ಬಿ, ಗೀತಾ ಸಿದ್ದುಮನಿ, ಬಸನಗೌಡಾ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವಿಶೇಷ ಶಿಕ್ಷಕರು ಶುಭಂ ಕಿತ್ತೂರ ಮತ್ತು ಅನಿಲ ಶಿಂದೋಳಿ (ಎಸ್‌ಬಿಐಎಫ್) ಅವರು ಕಾರ್ಯಕ್ರಮವನ್ನು ಸಂಘಟಿಸಿದರು, ಬೈಲಹೋಂಗಲ ಆಯ್‌ಇಆರ್‌ಟಿ ಕಾಜಗಾರ್ ನಿರೂಪಿಸಿದರು.  

         ಕೆಂಗನೂರು ಶಾಲಾ ವಿದ್ಯಾರ್ಥಿನಿ ಆಯಿಷಾ ನದಾಫ್ ಅವರನ್ನು ಕ್ರೀಡೆ ಮತ್ತು ಕಲಾ ಸಂಸ್ಕೃತಿಯಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಸಮರ್ಥನಂ ಸಂಸ್ಥೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.