ಸ್ವಚ್ಛ ಪಟ್ಟಣ ಪೌರ ಕಾರ್ಮಿಕರ ಕೊಡುಗೆ : ಉಪಾಧ್ಯಕ್ಷ ಅರಕೇರಿ

ಸ್ವಚ್ಛ ಪಟ್ಟಣ ಪೌರ ಕಾರ್ಮಿಕರ ಕೊಡುಗೆ : ಉಪಾಧ್ಯಕ್ಷ ಅರಕೇರಿ Contribution of civic workers to clean city: Vice President Arakeri

ಸ್ವಚ್ಛ ಪಟ್ಟಣ ಪೌರ ಕಾರ್ಮಿಕರ ಕೊಡುಗೆ : ಉಪಾಧ್ಯಕ್ಷ ಅರಕೇರಿ 

ಹಾರೂಗೇರಿ, 24 : ಶುಚಿತ್ವವೇ ದೈವತ್ವ. ಪೌರಕಾರ್ಮಿಕರ ಸೇವೆ ಮತ್ತು ತ್ಯಾಗವು ವೈದ್ಯ, ಇಂಜೀನಿಯರ ಹಾಗೂ ಪರಿಸರ ಪ್ರೇಮಿಗಳಿಗಿಂತಲೂ ಹಿರಿದಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಬಸವರಾಜ ಅರಕೇರಿ ಹೇಳಿದರು. 

  ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಎಲ್ಲೆಡೆ ಸ್ವಚ್ಛತೆ ಹಾಗೂ ಉತ್ತಮ ಆರೋಗ್ಯ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ಊರನ್ನು ಸ್ವಚ್ಛ ಮಾಡುವವರ ಬದುಕು ಹಸನಾಗಬೇಕಿದೆ. ಅವರಿಗೆ ಸಮುದಾಯದಿಂದ ಸಮಾಜದಲ್ಲಿ ಪ್ರಶಂಸೆಯ ಮಾತುಗಳ ಜೊತೆಗೆ ಗೌರವ ಇರಲಿ. ಸ್ವಚ್ಛ ಪಟ್ಟಣ ಪೌರ ಕಾರ್ಮಿಕರ ಕೊಡುಗೆಯಾಗಿದೆ. ಇಮ್ಮಿಂದಲೇ ಸ್ವಚ್ಛತೆ, ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. 

  ಮುಖ್ಯಾಧಿಕಾರಿ ಬಸವರಾಜ ಮನಗೂಳಿ ಮಾತನಾಡುತ್ತ ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು. ಪೌರಕಾರ್ಮಿಕರು ಕರ್ತವ್ಯ ಪ್ರಜ್ಞೆಯಿಂದ ಪ್ರಾಮಾಣಿಕ ಕೆಲಸ ಮಾಡುತ್ತಾರೆ. ಪುರಸಭೆ ನಿಮ್ಮ ಜತೆ ಇರಲಿದೆ ಎಂದು ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯಲಿರುವ ಸೌಲಭ್ಯಗಳನ್ನು ತಿಳಿಸಿದರು. 

  ಇದೇವೇಳೆ ಖಾಯಂ ಸಿಬ್ಬಂದಿಗಳಿಗೆ ತಲಾ 7000ರೂ. ವಿಶೇಷ ಭತ್ಯೆ ನೀಡಿ ಸನ್ಮಾನಿಸಲಾಯಿತು. ನಂತರ ಪೌರಕಾರ್ಮಿಕರು ತಮಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಮತ್ತು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಅವಕಾಶ ಸಿಗದಿದ್ದಕ್ಕೆ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಸಭೆಯಿಂದ ಹೊರನಡೆದ ಘಟನೆ ನಡೆಯಿತು.  

  ಪುರಸಭೆ ಅಧ್ಯಕ್ಷ ವಸಂತ ಲಾಳಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಆನಂದ ಪಾಟೀಲ, ಮಾಳು ಹಾಡಕಾರ, ಬಸವರಾಜ ಚೌಗಲಾ, ಬುರಾನ ಶೇಖ, ಕಂದಾಯ ಅಧಿಕಾರಿ ಭೀಮಶಿ ಅಂತರಗಟ್ಟಿ, ಸಮುದಾಯ ಸಂಘಟನಾಧಿಕಾರಿ ಪಿ.ವಿ.ಹವಳೇವ್ವಗೋಳ, ಶಂಕರ ಪಾಗೆ, ಸುನಂದಾ ಠಕ್ಕಣ್ಣವರ, ಸಂಜೀವ ಗಸ್ತಿ, ಗಂಗಯ್ಯ ಮಠಪತಿ, ಬಸವರಾಜ ಬಡಿಗೇರ, ಶಂಕರ ಕಮತಗಿ, ಶರಣಪ್ಪ ಬಡಿಗೇರ, ಮಾರುತಿ ಸರಿಕರ, ರಾಜಶೇಖರ ಕಳಸ್ಕರ, ಸಿದ್ದು ಉಳ್ಳಾಗಡ್ಡಿ, ಮುಬಾರಕ ಜಮಾದಾರ, ಲೋಕೇಶ ಕಡಪಟ್ಟಿ, ಶ್ರಾವಣ ಖನದಾಳ ಮತ್ತಿತರರು ಉಪಸ್ಥಿತರಿದ್ದರು. 

(ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ನಮ್ಮ ಕಷ್ಟ ಸುಖಗಳನ್ನು ಮಾತನಾಡಲು ಅವಕಾಶ ಮಾಡಿಕೊಡಲಿಲ್ಲ. 3 ತಿಂಗಳಿಂದ ಸಂಬಳವಾಗಿಲ್ಲ. ಮಳೆಗಾಲ, ಚಳಿಗಾಲದಲ್ಲಿ ಪೌರಕಾರ್ಮಿಕರ ಕಿಟ್‌ಗಳನ್ನು ಪೂರೈಸುತ್ತಿಲ್ಲ. ದಿನಪ್ರತಿ ಕೆಲಸ ಮಾಡುವಾಗ ಅಗತ್ಯವಿರುವ ಗ್ಲೌಜು, ಮಾಸ್ಕು ಇನ್ನೀತರ ಅಗತ್ಯ ಸಾಮಗ್ರಿಗಳನ್ನು ವಿತರಿಸಿಲ್ಲ. ನಮ್ಮ ನೋವನ್ನು ಪುರಸಭೆಯ ಯಾವೊಬ್ಬ ಅಧಿಕಾರಿಗಳು ಕೇಳುತ್ತಿಲ್ಲ.  ಹಣಮಂತ ಕಾಂಬಳೆ, ಅಧ್ಯಕ್ಷರು ಪೌರಕಾರ್ಮಿಕರ ಸಂಘ)