ಮಕ್ಕಳು ತಮ್ಮ ಸಮಸ್ಯೆಗಳನ್ನು ಸ್ಥಳೀಯ ಸರಕಾರಕ್ಕೆ ತಿಳಿಸಿ: ಶೇಖರಗೌಡ ಜಿ ರಾಮತ್ನಾಳ

Children tell their problems to the local government: Shekar Gowda G Ramatna

ಮಕ್ಕಳು ತಮ್ಮ ಸಮಸ್ಯೆಗಳನ್ನು ಸ್ಥಳೀಯ ಸರಕಾರಕ್ಕೆ ತಿಳಿಸಿ: ಶೇಖರಗೌಡ ಜಿ ರಾಮತ್ನಾಳ 

 ಕೊಪ್ಪಳ 13: ಮಕ್ಕಳು ತಮ್ಮ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಸ್ಥಳೀಯ ಸರಕಾರಕ್ಕೆ ತಿಳಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಹೇಳಿದರು. 

ಅವರು ಶುಕ್ರವಾರದಂದು ಕೊಪ್ಪಳ ತಾಲೂಕಿನ ಕಲ್ಲತಾವರಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ದನಕನದೊಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 

ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಹಾಗೂ ಮಕ್ಕಳ ಭಾಗವಹಿಸುವ ಹಕ್ಕುಗಳನ್ನು ಪ್ರೇರೆಪಿಸಲು ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ಹಾಗೂ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆ ಎಂಬ ವಿನೂತನವಾದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಈ ಮಕ್ಕಳ ಗ್ರಾಮಸಭೆಯ ವಿಶೇಷತೆ ಎಂದರೆ, ಜಿಲ್ಲೆಯಲ್ಲಿ ಸುಮಾರು 10 ವರ್ಷಗಳಿಂದಲೂ ನಿರಂತರವಾಗಿ ಮಕ್ಕಳ ಗ್ರಾಮಸಭೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಗ್ರಾಮಸಭೆಗಳಲ್ಲಿ ಮಕ್ಕಳು ಸಲ್ಲಿಸುವ ಸಮಸ್ಯೆಗಳನ್ನು ಪರಿಹರಿಸಲು ಆಯೋಗವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತದೆ. ಅಲ್ಲದೇ ಮಕ್ಕಳು ಸಲ್ಲಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಆಯ್ಯ-ವ್ಯಯವನ್ನು ಮಂಡಿಸಬೇಕು, ಗ್ರಾಮ ಪಂಚಾಯತ್‌ನ ಒಟ್ಟು ಅನುದಾನದಲ್ಲಿ ಮಕ್ಕಳಿಗಾಗಿಯೇ ಶೇ 5ರಷ್ಟು ಅನುದಾನವನ್ನು ಮೀಸಲಿಡಬಹುದಾಗಿದ್ದು, ಈ ಕುರಿತು ಕ್ರಮವಹಿಸುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಕಡಗದ ಅವರು ಮಾತನಾಡಿ, ಭಾರತ ದೇಶವು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿರುತ್ತದೆ. ಮಕ್ಕಳಸ್ನೇಹಿ ವಾತಾವರಣವನ್ನು ನಿರ್ಮಿಸಲು ಹಾಗೂ ಭಾರತ ಸಂವಿಧಾನವು ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಲು ನೀಡಿರುವ ಅವಕಾಶಗಳನ್ವಯ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ, ಮಕ್ಕಳ ರಕ್ಷಣೆ, ಮಕ್ಕಳ ಭಾಗವಹಿಸುವಿಕೆಯ ಹಕ್ಕುಗಳನ್ನು ಖಾತ್ರಿಪಡಿಸಲು 2024 ನವೆಂಬರ್ 14 ರಿಂದ 2025ರ ಜನೆವರಿ 24 ರವರೆಗೆ 10 ವಾರಗಳ ಮಕ್ಕಳಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ಹಾಗೂ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲು ಆದೇಶ ನೀಡಿದ್ದು, ಅದರನ್ವಯ ಗ್ರಾಮ ಸಭೆ ಆಯೋಜನೆಯೊಂದಿಗೆ 10 ವಾರಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಗಂಗಪ್ಪ ನಾಯಕ್, ಗ್ರಾಮೀಣ ಉದ್ಯೋಗ್ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ವೆಂಕೋಬ, ಪ್ರತಿಭಾ ಕಾಶಿಮಠ, ಶಿವಶರಣಪ್ಪ ಸೇರಿದಂತೆ ಕಲ್ಲತಾವರಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಯಮನೂರ​‍್ಪ ಕಬ್ಬಣ್ಣವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.