ಮಕ್ಕಳಲ್ಲಿನ ಭಯವನ್ನು ಹೋಗಲಾಡಿಸಿ ಮೂಢ ನಂಬಿಕೆಗಳ ವಿರುದ್ಧ ಎಚ್ಚತ್ತುಕೊಳ್ಳಬೇಕು
ಹಾವೇರಿ 25: ಮಕ್ಕಳ ಸಾಹಿತ್ಯ ಬೋಧನಾ ಸಾಹಿತ್ಯವಾಗದೆ, ಹಳೆಯ ಮಾದರಿ ಮುರಿದು ತಂತ್ರಜ್ಞಾನದ ಜೊತೆಗೆ ಸಾಗಿ ಹೊಸ ಮಾದರಿಯ ಮಕ್ಕಳ ಸಾಹಿತ್ಯ ರಚನೆಯಾಗಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ತಮ್ಮಣ್ಣ ಬೀಗಾರ ಹೇಳಿದರು.ಇಲ್ಲಿಯ ಹೊಸಮಠದ ಆವರಣದಲ್ಲಿ ನುಡಿ ಬಳಗ ಬಳ್ಳಾರಿ,ಸಾಹಿತಿ ಕಲಾವಿದರ ಬಳಗ ಹಾಗೂ ಹೊಸಮಠ ಸಂಯುಕ್ತವಾಗಿ ಆಯೋಜಿಸಿದ ಮಕ್ಕಳ ಸಾಹಿತ್ಯ ಮಾಡರ್ನ ಟ್ರೆಂಡ್ ಎಂಬ ಸರಣಿ ಸಾಹಿತ್ಯ ಮಾಲೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕಾರಂತ,ಕುವೆಂಪು, ರಾಜರತ್ನಂ ಮುಂತಾದ ದಿಗ್ಗಜರು ಯಾವ ಹಂಜರಿಕೆಯಲ್ಲದೇ ಮಕ್ಕಳಿಗಾಗಿಯೇ ಸಾಹಿತ್ಯ ರಚಿಸಿದರು. ಚಂದಮಾಮ ಪತ್ರಿಕೆ ಆಕರ್ಷಕವಾಗಿ ಜಾನಪದೀಯ ಮೂಲದ ಸಾಹಿತ್ಯ ಪ್ರಕಟಿಸಿತು. ಅಂತಹ ವಾತಾವರಣ ಮತ್ತೆ ಬರಬೇಕೆಂದೂ ತಮ್ಮಣ್ನ ಬೀಗಾರ ಅಭಿಪ್ರಾಯಪಟ್ಟರು.
ಪ್ರಸಿದ್ಧ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲರ ಮಾತನಾಡಿ ಬಿಎಂಶ್ರೀ ಮುಂತಾದವರು ಇಂಗ್ಲೀಷ ಕಥಾನಕಗಳನ್ನು ಕನ್ನಡ ಭಾಷೆಗೆ ತರುವ ಮೂಲಕ ಮಕ್ಕಳ ಸಾಹಿತ್ಯವನ್ನು ಬೆಳೆಸಿದರು. ಬಾಲ್ಯದ ಆಳಕ್ಕೆ ಇಳಿದು ಅದರ ತಪ್ತ ಸಂವೇದನೆಗಳನ್ನು ಮಕ್ಕಳ ಸಾಹಿತ್ಯವಾಗಿ ಬರೆಯಬೇಕೆಂದರು.
ಸಾನಿಧ್ಯವಹಿಸಿದ್ದ ಬಸವಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ ಮಕ್ಕಳಲ್ಲಿ ಇರುವ ಭಯವನ್ನು ಮುರಿದು ಧೈರ್ಯ ಸ್ಥೈರ್ಯದ ಸಾಹಿತ್ಯ ಜೊತೆಗೆ ಮೂಢ ನಂಬಿಕೆಗಳ ವಿರುದ್ಧ ಎಚ್ಚರಿಸುವಂತಾಗಬೇಕು.ಅಗತ್ಯವಿದ್ದರೆ ಮಠದಲ್ಲಿ ನೂರು ವಿದ್ಯಾರ್ಥಿಗಳ ಕಾರ್ಯಾಗಾರವನ್ನು ಆಯೋಜಿಸಲು ಅನುಕೂಲ ಮಾಡಿಕೊಡುವುದಾಗಿ ಹೇಳಿದರು.
ಸಾಹಿತಿ ಸತೀಶ ಕುಲಕರ್ಣಿ, ಜಿ.ಎಂ. ಓಂಕಾರಣ್ಣನವರ, ಸೋಮನಾಥ ಡಿ. ಅನಿತಾ ಮಂಜುನಾಥ ಪ್ರತಿಕ್ರಿಯೆ ನೀಡಿ ಮಕ್ಕಳ ಸಾಹಿತ್ಯದ ಬಗ್ಗೆ ಚಿಂತನ ಮಂಥನ ನಿರಂತರವಾಗಿ ನಡೆಯಬೇಕೆಂದರು. ಮುಕ್ತ ಚರ್ಚೆಯಲ್ಲಿ ಸಾಹಿತಿ ಹನುಮಂತಗೌಡ ಗೊಲ್ಲರ,ಲಿಂಗರಾಜ ಸೊಟ್ಟಪ್ಪನವರ, ಶಿವಯೋಗಿ ಚರಂತಿಮಠ, ಡಾ.ಅಂಬಿಕಾ ಹಂಚಾಟೆ, ರೇಣುಕಾ ಗುಡಿಮನಿ ಪ್ರಶ್ನೋತ್ತರ ನಡೆಸಿದರು.ಆರಂಭದಲ್ಲಿ 4ಕಮಲಾ ಮತ್ತು ಮಠದ ವಚನ ಪ್ರಾರ್ಥನೆ ಹಾಡಿದರು. ಭಾಗ್ಯಾ ಎಂ.ಕೆ. ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ನಾಗರಾಜ ಎಂ. ಹುಡೇದ ನಡೆಸಿ ಕೊಟ್ಟರು.ಶಿಕ್ಷಕರಾದ ರಾಜಾಭಕ್ಷ ಮಣ್ಣೂರ ವಂದಿಸಿದರು.