ಮಿಷನ್ ವಾಸ್ತಲ್ಯ ಪೋರ್ಟಲ್ ಮುಖಾಂತರ ಮಕ್ಕಳನ್ನು ದತ್ತು ಪಡೆಯಬಹುದು: ಜಿಲ್ಲಾಧಿಕಾರಿ

ಮಿಷನ್ ವಾಸ್ತಲ್ಯ ಪೋರ್ಟಲ್ ಮುಖಾಂತರ ಮಕ್ಕಳನ್ನು ದತ್ತು ಪಡೆಯಬಹುದು: ಜಿಲ್ಲಾಧಿಕಾರಿ Children can be adopted through Mission Vastalya portal: District Collector

                      ಧಾರವಾಡ ತ25: ಅನಾಥ ಮಕ್ಕಳ ಹಾಗೂ ಶಿಶುಗಳ ಕಾನೂನುಬದ್ಧ ಹಸ್ತಾಂತರಕ್ಕಾಗಿ ಕೇಂದ್ರ ಸರ್ಕಾರವು ಮಿಷನ್ ವಾಸ್ತಲ್ಯ ಪೋರ್ಟಲ್ ಮೂಲಕ ಶಿಸ್ತುಬದ್ಧ ಕ್ರಮವಹಿಸಿದ್ದು, ಮಕ್ಕಳನ್ನು ದತ್ತು ಪಡೆಯುವವರು ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ಪಡೆದುಕೊಳ್ಳಬೇಕು. ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆಯುವುದು ಅಪರಾಧವಾಗಿದೆ. ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳನ್ನು ದತ್ತು ಪಡೆಯುವವರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಯ್ದೆ, ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

                      ಅವರು ಇಂದು (ನ.25) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಪಾಲನಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ದತ್ತು ಮಾಸಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. 

                  ಮಕ್ಕಳನ್ನು ದತ್ತು ಪಡೆಯುವಲ್ಲಿ ಅನೇಕರು ಮಧ್ಯವರ್ತಿಗಳ ಮಧ್ಯಸ್ಥಿಕೆಯಿಂದ ಮೊಸ ಹೊಗುತ್ತಾರೆ. ಮತ್ತು ಅಪರಾಧ ಪ್ರಕರಣದಲ್ಲಿ ಸಿಲುಕುತ್ತಾರೆ. ಅವರಿಗೆ ಮಕ್ಕಳನ್ನು ಅನಾಥಾಲಯ ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ಕಾನೂನುಬದ್ಧವಾಗಿ ದತ್ತು ಪಡೆಯಲು ಅಗತ್ಯ ಮಾಹಿತಿ ಮತ್ತು ಅರಿವು ನೀಡುವ ಅಗತ್ಯವಿರುವದರಿಂದ ಸಮಾಲೋಚಕರ ನೆರವು ನೀಡಲಾಗುತ್ತದೆ. ಅನೇಕ ಸಂಘ ಸಂಸ್ಥೆಗಳು ಈ ಕಾರ್ಯವನ್ನು ನಿರ್ವಹಿಸುತ್ತಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.  

                  ಸರಕಾರೇತರ ಸಂಘ ಸಂಸ್ಥೆಗಳು, ಆಸಕ್ತರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದರೆ ರಾಷ್ಟ್ರೀಯ ದತ್ತು ಮಾಸಾಚರಣೆ ಬಗ್ಗೆ ಇನ್ನೂ ಹೆಚ್ಚು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.  

                ಮಕ್ಕಳನ್ನು ಹೇಗೆ ದತ್ತು ಪಡೆಯಬೇಕು ಎಂದರೆ, ಮಿಷನ್ ವಾಸ್ತಲ್ಯ ಪೋರ್ಟಲ್ ಮುಖಾಂತರ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ, ನಂತರ ಅವರಿಗೆ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ ಮಾಹಿತಿ ಎಲ್ಲ ಜನರಿಗೂ ತಲುಪಬೇಕು ಮತ್ತು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಈ ಮಾಹಿತಿ ಹರಡಬೇಕು ಹಾಗೂ ಕಾನೂನು ಮುಖಾಂತರ ಮಕ್ಕಳನ್ನು ದತ್ತು ಪಡೆಯ ಬೇಕು ಎಂದು ಜನರಿಗೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. 

                 ನವೆಂಬರ್ ತಿಂಗಳಲ್ಲಿ ವಿಶೇಷಚೇತನ ಮಕ್ಕಳ ದತ್ತು ಪ್ರಕ್ರಿಯೆ ಕುರಿತು ಜಿಲ್ಲೆಯಾದ್ಯಂತ ಪ್ರಚಾರ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ತಾಲೂಕಾಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಜ್ಞಾವಿಧಿಯನ್ನು ಬೋಧಿಸುವ ಮತ್ತು ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಿ, ಅರಿವು ಮೂಡಿಸಿದ್ದಾರೆ.   

                 ಹುಬ್ಬಳ್ಳಿ ಧಾರವಾಡದಲ್ಲಿರುವ ನಸಿಂರ್ಗ್ ಕಾಲೇಜ್‌ಗಳಲ್ಲಿ ದತ್ತು ಪಡೆಯುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ ಮತ್ತು ಗ್ರಾಮ ಪಂಚಾಯತ್ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ವಾಹನದಲ್ಲಿ ದತ್ತು ಮಕ್ಕಳನ್ನು ಪಡೆಯುವ ಮಾಹಿತಿಯನ್ನು ಧ್ವನಿವರ್ಧಕ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ ಎಂದರು.   

               ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್‌. ದೊಡ್ಡಮನಿ ಅವರು ಮಾತನಾಡಿ, ಕೆಲವರು ಮಕ್ಕಳನ್ನು ಅನುಕಂಪ, ಪ್ರೀತಿ, ಕಳಕಳಿ ಆಧಾರದಲ್ಲಿ ನಿಯಮ ಪಾಲಿಸದೇ ದತ್ತು ತೆಗೆದುಕೊಳ್ಳುತ್ತಾರೆ. ಆದರೆ ಆ ರೀತಿಯಾಗಿ ದತ್ತು ತೆಗೆದುಕೊಳ್ಳುವುದು ಕಾನೂನುಬಾಹಿರವಾಗಿರುತ್ತದೆ ಎಂದು ಅವರು ಹೇಳಿದರು.  

                ಮಕ್ಕಳನ್ನು ಕೊಡುವವರು ಮತ್ತು ಪಡೆದುಕೊಳ್ಳುವವರು ಮುಂದೆ ಮಕ್ಕಳಿಗೆ ಯಾವುದೇ ರೀತಿ ತೊಂದರೆಗಳು ಆಗಬಾರದು ಎಂದರೆ ಕಾನೂನು ಮುಖಾಂತರ ಮಕ್ಕಳನ್ನು ದತ್ತು ಪಡೆದರೆ ಯಾವುದೇ ರೀತಿ ತೊಂದರೆಗಳು ಹಾಗೂ ಅಡಚಣೆಗಳು ಬರುವುದಿಲ್ಲ ಆದ್ದರಿಂದ ಇದರ ಕುರಿತು ಜನರಿಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು. 

               ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ನೂರಜಹಾನ ಕಿಲ್ಲೇದಾರ, ರವಿ ಭಂಡಾರಿ, ಎಕ್ಸಲರೆಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್‌ನ ಮೆಂಟರ್ ಪ್ರಕಾಶ ಹಳಿಯಾಳ, ಬಾಲಮಂದಿರಗಳ ಅಧೀಕ್ಷಕರುಗಳಾದ ಮಧುಮತಿ ಹೆಬ್ಬಳ್ಳಿ, ರೇಣುಕಾ ಕರಮಡಿ, ಅರ್ಚನಾ ಕೋಟಿ ಹಾಗೂ ಸುಜಾತಾ ಚನ್ನಪ್ಪಗೌಡರ ಹಾಗೂ ಬಾಲಕಿಯರ, ಬಾಲಕರ, ಮನೋವಿಕಲ ಬಾಲಕಿಯರ, ಸರ್ಕಾರಿ ಬಾಲಮಂದಿರ, ಹುಬ್ಬಳ್ಳಿ ಅಮೂಲ್ಯ (ಜಿ) ಶಿಶುಗೃಹ ಹಾಗೂ ಸರ್ಕಾರಿ ವೀಕ್ಷಣಾಲಯ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ರೈಲ್ವೆ ಹೆಲ್ಪ್‌ ಡೆಸ್ಕ್‌, ತೆರೆದ ತಂಗುದಾಣ ಸಿಬ್ಬಂದಿಗಳು ಭಾಗವಹಿಸಿದ್ದರು.