ದಿ. 28ರ ಅನಿರ್ಧಿಷ್ಟಾವಧಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

ದಿ. 28ರ ಅನಿರ್ಧಿಷ್ಟಾವಧಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ Call to participate in large numbers in the indefinite Satyagraha on the 28th


ರಾಣೇಬೆನ್ನೂರು 24: ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇದೇ ದಿ. 28ರಂದು ಕರ್ನಾಟಕ ರಾಜ್ಯ ರೈತ ಸಂಘ( ಕೋಡಿಹಳ್ಳಿ ಚಂದ್ರಶೇಖರ್)ವು ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕಾ ಘಟಕ ಅಧ್ಯಕ್ಷ ಚಂಸು ಪಾಟೀಲ್ ಮನವಿ ಮಾಡಿದರು.  

ಅವರು ಇಲ್ಲಿನ  ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ, ಮಾಧ್ಯಮಗೋಷ್ಠಿಯಲ್ಲಿ   ಮಾತನಾಡಿದರು. ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಕರಾಳ ಕೃಷಿ ಕಾಯ್ದೆಗಳು ರಾಜ್ಯದಲ್ಲಿ ಇನ್ನೂ ಮುಂದುವರೆದಿವೆ. 2023ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷವು ಈ ಕಾಯ್ದೆಗಳನ್ನು ವಾಪಾಸು ಪಡೆಯುವ ಭರವಸೆ ಕೊಟ್ಟಿತ್ತು. ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಕರಾಳ ಕೃಷಿ ಕಾಯ್ದೆಗಳು ವಾಪಸಾಗಿಲ್ಲ.

ಮಾತು ತಪ್ಪಿದ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಕಾಯ್ದೆಗಳ ವಾಪಸಾತಿಗೆ ಒತ್ತಾಯಿಸುವುದು ಇಂದು  ಅನಿವಾರ್ಯ ಆಗಿರುವುದರ ಹಿನ್ನೆಲೆಯಲ್ಲಿ ಈ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಎಂದರು. ರೈತರ ಭೂಸ್ವಾಧೀನ ಪ್ರಕ್ರಿಯೆ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆದಿದ್ದು, ಇದಕ್ಕಾಗಿಯೆ ಭೂ ನೋಂದಣಿ ಕಛೇರಿಗಳ ಕೆಲಸದ ವೇಳೆಯನ್ನೂ ವಿಸ್ತರಿಸಲಾಗಿದೆ. ಭೂಮಿಯ ಬೆಲೆ ಗಗನಕ್ಕೆ ಮುಟ್ಟಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಹತ್ತು ವರ್ಷಗಳಲ್ಲಿ ಶೇ. 90ರಷ್ಟು ರೈತರು ಭೂರಹಿತರಾಗಲಿದ್ದಾರೆ ಎಂದು ಅವರು ಆತಂಕ ಮತ್ತು ವಿಷಾದ  ವ್ಯಕ್ತಪಡಿಸಿದರು. ್ಳ 

ಬೆಂಬಲ ಬೆಲೆಗೆ ಪೂರಕವಾಗಿ ರೈತರ ಉತ್ಪನ್ನಗಳ ಖರೀದಿಗೆ ಒಂದು ಸಾವಿರ ಕೋಟಿ ರೂ. ಆವರ್ತನಿಧಿ ಸ್ಥಾಪಿಸಿ, ವರ್ಷವೀಡೀ ಖರೀದಿ ಕೇಂದ್ರಗಳಲ್ಲಿ ರೈತರ ಉತ್ಪನ್ನಗಳ ಖರೀದಿಗೆ ಯೋಜನೆ ರೂಪಿಸಬೇಕು. 2023ರಲ್ಲಿ ರಾಜ್ಯದಲ್ಲಿ ಬರಗಾಲದ ಬೆಳೆನಷ್ಟ 36 ಸಾವಿರ ಕೋಟಿ ರೂ. ಎಂದು ಸರ್ಕಾರವೇ ಅಂದಾಜಿಸಿ ಘೋಷಣೆ ಹೊರಡಿಸಿತ್ತು. ಈ ಪರಿಹಾರವನ್ನು ಈ ವರೆಗೂ ರೈತರಿಗೆ ತಲುಪಿಸದೇ ವಂಚಿಸಲಾಗಿದೆ. ಇದೂ ಸೇರಿದಂತೆ ಈ ವರ್ಷದ ಬೆಳೆನಷ್ಟ ಪರಿಹಾರವನ್ನು ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ಚಂಸು ಪಾಟೀಲ ತಿಳಿಸಿದರು.ಬೆಳೆವಿಮೆ ಯೋಜನೆ ಕೇವಲ ವಿಮೆಕಂಪನಿಗಳ ಲಾಭಕ್ಕೆ ಎಂಬಂತಾಗಿದ್ದು, ಪ್ರತಿವರ್ಷವೂ ರೈತರಿಗೆ ವಿಮೆ ಹಣ ಪಾವತಿಯಾಗುವಂತೆ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಜಾರಿಗೊಳಿಸಬೇಕು.

ಕೃಷಿ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಸರಿಯಾದ ಕ್ರಮ ಕೈಗೊಳ್ಳಬೇಕು. ಸೌರವಿದ್ಯುತ್ ಪೂರೈಕೆಯ ನೆಪದಲ್ಲಿ ರೈತರನ್ನು ವಿದ್ಯುತ್‌ಜಾಲದಿಂದ ಹೊರಗಿಡುವುದನ್ನು ನಿರ್ಬಂಧಿಸಬೇಕು. ಸೌರ ಹಾಗೂ ಗಾಳಿ ವಿದ್ಯುತ್ ಉತ್ಪಾದನೆಗೆ ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡದೇ ನಮ್ಮ ರೈತರಿಗೇ ಉತ್ತೇಜನ ನೀಡಬೇಕು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ದಿಶೆಯಲ್ಲಿ ಸರ್ಕಾರ ಬಜೆಟ್ಟಿನಲ್ಲಿ ಒಂದು ಲಕ್ಷ ಕೋಟಿ ರೂ. ಗಳನ್ನು ಮೀಸಲಿರಿಸಬೇಕು. ಈ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಸತ್ಯಾಗ್ರಹ ಹಮ್ಮಿಕೊಂಡಿದ್ದು ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಪೋನ್‌: 9113689137 ಹಾಗೂ ಪೋನ್‌: 70902 05624  ಸಂಪರ್ಕಿಸಬೇಕೆಂದು ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಪರಸಣ್ಣನವರ, ಪ್ರಧಾನ ಸಂಚಾಲಕ ಸಂತೋಷ ಅಣಜಿ, ಕೂನಬೇವು ಗ್ರಾಮ ಘಟಕದ ಅಧ್ಯಕ್ಷ ಮಾದೇವಪ್ಪ ಬಣಕಾರ, ಕರಬಸಪ್ಪ ಕಡೇನಾಯಕನಹಳ್ಳಿ, ಸುರೇಶ ಧುಳಾವಳೆ, ಕಿರಣ ಅಣಜಿ ಮೊಧಲಾದವರು ಉಪಸ್ಥಿತರಿದ್ದರು.