ಅಮ್ಮಿನಬಾವಿಯಲ್ಲಿ ಬುತ್ತಿ ಜಾತ್ರೆಯ ಸಂಭ್ರಮ
Buthi Fair celebrations at Amminabavi
ಲೋಕದರ್ಶನ ವರದಿ
ಧಾರವಾಡ 16 : ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದಿರುವ ಮಹಾದಾಸೋಹಿ ಶ್ರೀಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನದ ಸಾಂದರ್ಭಿಕ ಸನ್ನಿವೇಶಕ್ಕೆ ಅನುಗುಣವಾಗಿ ರವಿವಾರ ಅಮ್ಮಿನಬಾವಿಯಲ್ಲಿ ಬುತ್ತಿ ಜಾತ್ರೆಯ ಸಂಭ್ರಮ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿತ್ತು.
‘ಮಹಾದಾಸೋಹಿ’ ಎಂದೇ ಪ್ರಸಿದ್ಧವಾಗಿರುವ ಶ್ರೀಕಲಬುರ್ಗಿ ಶರಣಬಸವೇಶ್ವರರ ಹೆಸರಿನಲ್ಲಿ ವಿಶಿಷ್ಟ ದಾಸೋಹ ಸೇವೆಗೈಯಲು ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕೌಲಗೇರಿ, ಚಂದನಮಟ್ಟಿ ಗ್ರಾಮಗಳೂ ಸೇರಿದಂತೆ ಧಾರವಾಡ ನಗರದಿಂದಲೂ ಮಾತೆಯರು ಬುತ್ತಿಯೊಂದಿಗೆ ವಿಶೇಷ ಖಾದ್ಯಗಳನ್ನು ಬುಟ್ಟಿಯಲ್ಲಿ ಹೊತ್ತು ತಂದಿದ್ದರು.
ಬುತ್ತಿ ಮೆರವಣಿಗೆ : ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಹೊತ್ತು ತಂದಿದ್ದ ಬುತ್ತಿಬುಟ್ಟಿಗಳ ಮೆರವಣಿಗೆ ಸವದತ್ತಿ ಮುಖ್ಯ ರಸ್ತೆಯ ಅಮ್ಮಿನಬಾವಿ ಬಸ್ ನಿಲ್ದಾಣದಿಂದ ಆರಂಭಗೊಂಡು ಗ್ರಾಮದ ಎಲ್ಲ ಪ್ರಮುಖ ಓಣಿಗಳಲ್ಲಿ ಅತ್ಯಂತ ಸಡಗರದಿಂದ ಜರುಗಿತು. ಭಕ್ತರು ಮಾಡಿದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ನಿರಂತರ ನಾಮಸ್ಮರಣೆಯ ಝೇಂಕಾರ ಈ ಮೆರವಣಿಗೆಗೆ ಕಳೆತುಂಬಿತ್ತು.
ರೈತ ಮಹಿಳೆಯರು ಭಕ್ತಿಯ ಬದ್ಧತೆಯಲ್ಲಿ ಹೊತ್ತು ತಂದ ಮೊಸರನ್ನದ ಬುತ್ತಿಯ ಜೊತೆಗೆ ಹುರಕ್ಕಿ ಹೋಳಿಗೆ, ಹೂರಣದ ಹೋಳಿಗೆ, ಸಜ್ಜಕದ ಹೋಳಿಗೆ, ಶೇಂಗಾ ಹೋಳಿಗೆ, ಸುರುಳಿ ಹೋಳಿಗೆ, ಗಾರಿಗೆ, ಕರ್ಚಿಕಾಯಿ, ಬುಂದೆ ಉಂಡಿ, ಜಿಲೇಬಿ, ಹೂರಣದ ಕಡಬು, ಜೋಳದ ಉಂಡಿಗಡಬು, ಕಿಚಡಿ, ಹಲವಾರು ವಿಧದ ಚಟ್ನಿ, ವಿವಿಧ ಕಾಳುಪಲ್ಯ, ತರಕಾರಿಯ ಪಲ್ಯ, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಚಪಾತಿ ದಾಸೋಹ ಸೇವೆಗೆ ಸಮರ್ಿತಗೊಂಡವು.
ಅಕ್ಕಿಪ್ರಸಾದ ಆಶೀರ್ವಾದ : ದಾಸೋಹ ಸೇವೆಯ ನಂತರ ಬುತ್ತಿಯನ್ನು ಹೊತ್ತು ತಂದ ಪ್ರತಿಯೊಬ್ಬ ರೈತ ಮಹಿಳೆಯರ ಬುಟ್ಟಿಗಳಿಗೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಮ್ಮ ಕೃಪಾಹಸ್ತದಿಂದ ಒಂದು ಮುಷ್ಟಿ ಅಕ್ಕಿ ಪ್ರಸಾದ ನೀಡಿ, ‘ಸದಾಕಾಲವೂ ಧಾನ್ಯ ಸಂಪತ್ತು ಸಮೃದ್ಧಿಯಾಗಲಿ, ಎಲ್ಲರ ಬಾಳು ಬಲಿಯಲಿ’ ಎಂಬ ಕೃಪಾವಾಣಿಯೊಂದಿಗೆ ಆಶೀರ್ವಾದ ಮಾಡಿದರು. ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕೌಲಗೇರಿ, ಚಂದನಮಟ್ಟಿ ಗ್ರಾಮಗಳ ಅನೇಕ ಗಣ್ಯರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 