ಯಲ್ಲಮ್ಮನ ಗುಡ್ಡದಲ್ಲಿ ಭಾರತ ಹುಣ್ಣಿಮೆ ಸಂಭ್ರಮ
Bharat Purnima Celebration at Yellamma Hill
ಉಗರಗೋಳ 01: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಭಾನುವಾರ ಭಾರತ ಹುಣ್ಣಿಮೆ ಸಂಭ್ರಮ ಮನೆಮಾಡಿತ್ತು. ಎತ್ತ ನೋಡಿದರೂ ಜನಸಾಗರ. ಮುಗಿಲು ಮುಟ್ಟಿದ ಜೈಕಾರ. ಇದರ ಮಧ್ಯೆ ಬೃಹತ್ ಜಾತ್ರೆ ಸಡಗರದಿಂದ ನಡೆಯಿತು. ಈ ಜಾತ್ರೆಗೆ ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ 20 ಲಕ್ಷಕ್ಕೂ ಅಧಿಕ ಭಕ್ತರು ಶ್ರದ್ಧೆ-ಭಕ್ತಿಯಿಂದ ಧಾರ್ಮಿಕ ಆಚರಣೆ ಕೈಗೊಂಡು, ಯಲ್ಲಮ್ಮ ದೇವಿಗೆ ಕೃಪೆಗೆ ಪಾತ್ರರಾದರು. ಜಾತ್ರೆಗೂ ಎರಡು ದಿನ ಮುಂಚೆಯೇ ಗುಡ್ಡಕ್ಕೆ ಭಕ್ತರು ಹರಿದುಬರಲಾಂಭಿಸಿದ್ದರು. ಶನಿವಾರ ರಾತ್ರಿಯವರೆಗೆ ಇಡೀ ಗುಡ್ಡದ ಪರಿಸರ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ.. ಎಂಬ ಜೈಕಾರ ಇಡೀ ಗುಡ್ಡದಲ್ಲಿ ಪ್ರತಿಧ್ವನಿಸಿತು. ಇದು ರಾಜ್ಯದ ದೊಡ್ಡ ಜಾತ್ರೆ. ಮೈಕೊರೆಯುವ ಚಳಿ ಮಧ್ಯೆಯೂ ಲಕ್ಷಾಂತರ ಸಂಖ್ಯೆಯಲ್ಲಿ ಬಂದಿದ್ದ ಭಕ್ತಾಧಿಗಳು, ಗುಡ್ಡದ ವಿಶಾಲವಾದ ಪರಿಸರದಲ್ಲಿ ಬಿಡಾರ ಹೂಡಿದ್ದರು. ಅಲ್ಲಿಯೇ ಟೆಂಟ್ ಹಾಕಿ ಉಳಿದುಕೊಂಡರು.
ರಸ್ತೆಬದಿ ಮತ್ತು ವಿಶಾಲವಾದ ಪರಿಸರದಲ್ಲಿ ಅಲ್ಲಲ್ಲಿ ಒಲೆಗಳನ್ನು ಹೂಡಿ, ಅನ್ನ-ಸಾರು, ಪಲ್ಯೆ, ಹೋಳಿಗೆ, ವಡೆ, ಭಜ್ಜಿ ಮೊದಲಾದವುಗಳನ್ನು ತಯಾರಿಸಿ ಪರಡಿ ತುಂಬಿದರು. ನಂತರ ಕುಟುಂಬಸ್ಥರೆಲ್ಲ ಒಟ್ಟಾಗಿ ಕುಳಿತು ಮೃಷ್ಟಾನ್ನ ಭೋಜನ ಸವಿದರು. ಯಲ್ಲಮ್ಮ ದೇವಿ ದೇವಸ್ಥಾನ ಬಳಿಯ ಎಣ್ಣೆ ಹೊಂಡದಲ್ಲಿ ಪುರುಷರು ಹಾಗೂ ಮಹಿಳೆಯರ ಸ್ನಾನಕ್ಕಾಗಿ ಪ್ರತ್ಯೇಕ ಶಾವರ್ ಇತ್ತು. ಸ್ನಾನಗೃಹಗಳಲ್ಲಿ ಬಿಸೀನೀರಿನ ವ್ಯವಸ್ಥೆ ಇತ್ತು. ಭಕ್ತರಿಗೆ ಅನುಕೂಲವಾಗಲೆಂದು 50 ಕಡೆ ಮೊಬೈಲ್ ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆ, 41 ಹೈಮಾಸ್ಟ್ ಬೆಳಕಿನ ವ್ಯವಸ್ಥೆ ಇತ್ತು.
ತಾಯಿ ಯಲ್ಲಮ್ಮನ ಗುಡ್ಡಕ್ಕೆ ನಾನು ಬರ್ತೆನ್ರೇಯವ್ವ,_ಕಣ್ಣು ಕಾಣದ ಭಕ್ತನ ನಾನು ನನ್ನ ಕರ್ಕೋಂಡ ಹೋಗ್ರೆವ್ವ, ಯಲ್ಲವ್ವನ ಜಾತ್ರಿ ಬಲು ಜೋರ, ವರ್ಷವರ್ಷ ಇರ್ತೈತಿ ದರ್ಬಾರ್ ಸೇರಿದಂತೆ ವಿವಿಧ ಗೀತೆಗಳು ಗುಡ್ಡದ ತುಂಬೆಲ್ಲ ಅನುರಣಿಸಿದವು. ಈ ಹುಣ್ಣಿಮೆಯಲ್ಲಿ ದೇವಿ ಮುತ್ತೈದೆ ಆಗುತ್ತಾಳೆ. ಹಾಗಾಗಿ ಇಲ್ಲಿಗೆ ಬರುವ ಮಹಿಳೆ ಕನಿಷ್ಠ 11 ಹಸಿರು ಬಳೆಗಳನ್ನಾದರೂ ಧರಿಸಬೇಕು ಎಂಬ ನಂಬಿಕೆ ಭಕ್ತರಲ್ಲಿ ಬಲವಾಗಿ ಬೇರೂರಿದೆ. ಹಾಗಾಗಿ ಗುಡ್ಡಕ್ಕೆ ಬಂದ ಬಹುತೇಕ ಮಹಿಳೆಯರು, ಮುತ್ತೈದೆತನದ ಸಂಕೇತವಾದ ಹಸಿರು ಬಳೆ ಧರಿಸಿ ಸಂಭ್ರಮಿಸಿದರು.
ಶಾಸಕ ವಿಶ್ವಾಸ ವೈದ್ಯ, ಜಿಲ್ಲಾಡಳಿತ, ದೇವಸ್ಥಾನ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿಯವರು ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಪರಿಶ್ರಮಿಸಿದರು. ಜಾತ್ರೆಯಲ್ಲಿ ಕಳೆದುಕೊಂಡ ಮಕ್ಕಳು, ಹಿರಿಯರನ್ನು ಹುಡುಕಲು ಅನುಕೂಲವಾಗಲೆಂದು ಪೊಲೀಸ್ ಇಲಾಖೆಯವರು ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದರು. ಇದರಿಂದ ತಮ್ಮವರಿಂದ ಕಳೆದುಕೊಂಡವರು ಮರಳಿ ತಮ್ಮವರನ್ನು ಸೇರಿ ನಿರಾಳವಾದರರು.
ಪ್ರತಿವರ್ಷ ಈ ಜಾತ್ರೆಯಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿ, ಸವಾರರು ಪರದಾಡುವಂತಾಗುತ್ತಿತ್ತು. ಆದರೆ, ಈ ಬಾರಿ ಬೆಳಗಾವಿ ಎಸ್‌ಪಿ ಕೆ.ರಾಮರಾಜನ್ ಗುಡ್ಡಕ್ಕೆ ಭೇಟಿ ನೀಡಿ, ಸುಗಮ ಸಂಚಾರ ನಿರ್ವಹಣೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದರು. ಅವರ ಮಾರ್ಗದರ್ಶನದಲ್ಲಿ ರಾಮದುರ್ಗ ಡಿವೈಎಸ್‌ಪಿ ಚಿದಂಬರ ಮಡಿವಾಳರ, ಸವದತ್ತಿ ಸಿಪಿಐ ಸುರೇಶ ಬೆಂಡಿಗೊಂಬಳ, ಪಿಎಸ್‌ಐ ಕಲ್ಮೇಶ ಬನ್ನೂರ ನೇತೃತ್ವದ ತಂಡ ಸಂಚಾರ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿದ್ದರಿಂದ ಹೆಚ್ಚಿನ ಸಮಸ್ಯೆಯಾಗಲಿಲ್ಲ. ಜಾತ್ರೆ ಪ್ರತಿ ಚಟುವಟಿಕೆ ಮೇಲೂ ನಿಗಾ ವಹಿಸಲು ಡ್ರೋನ್ ಕ್ಯಾಮೆರಾ ಬಳಸಲಾಗಿತ್ತು. ಯಲ್ಲಮ್ಮನಗುಡ್ಡದಿಂದ ಸವದತ್ತಿ, ಜೋಗುಳಬಾವಿ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 