ಲೋಕದರ್ಶನ ವರದಿ
ಬಳ್ಳಾರಿ 06:ಕರ್ನಾಟಕ ಹಾಗೂ ಹಿಂದೂಸ್ಥಾನೀ ಸಂಗೀತ ಕ್ಷೇತ್ರದ ಸರ್ವಶ್ರೇಷ್ಠ ಸಂಗೀತ ವಿದೂಷಿ, ಭಾರತ ರತ್ನ ಎಂಎಸ್ ಸುಬ್ಬುಲಕ್ಷ್ಮಿ ಅವರ ಮೊಮ್ಮಗಳು ಮತ್ತು ಖ್ಯಾತ ಸಂಗೀತಗಾರ್ತಿ ಕುಮಾರಿ ಎಸ್.ಸೌಂದರ್ಯ ಅವರಿಂದ ಜೂನ್ 9ರಂದು ಬಳ್ಳಾರಿಯಲ್ಲಿ ಪ್ರಭಾತ ಸಂಗೀತಂ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಿಸಿಲ ನಾಡಿನ ಜನತೆಗೆ ಕಳೆದ ಹಲವು ವರ್ಷಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳ ಮೂಲಕ ಸಂಗೀತಾಸಕ್ತರನ್ನು ಸಂತೃಪ್ತಿಗೊಳಿಸುತ್ತಿರುವ ಬಳ್ಳಾರಿ ಮ್ಯೂಸಿಕ್ ಕ್ಲಬ್ ಇವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಅನಂತಪುರ(ಡಾ.ರಾಜ್ಕುಮಾರ್) ರಸ್ತೆಯಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಬೆಳಿಗ್ಗೆ 8 ರಿಂದ 9-30ರ ಸಮಯದಲ್ಲಿ ಈ ಪ್ರಭಾತ ಸಂಗೀತಂ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರದ ಸೂರ್ಯೋದಯದ ಸಮಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಡಾ.ರಾಧಾ ವಿಶ್ವನಾಥನ್ ಮತ್ತು ಸಂಗೀತ ವಿದೂಷಿ ನೀಲಾ ರಾಮಗೋಪಾಲ್ ಅವರ ಮೊಮ್ಮಗಳೂ ಆಗಿರುವ ಎಸ್.ಸೌಂದರ್ಯ ಅವರು ದೇವರ ನಾಮಗಳ ಮೂಲಕ ಸಂಗೀತಾರಾಧನೆ ಮಾಡಲಿದ್ದಾರೆ.
ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಷ್ಟ್ರದ ನಾನಾ ಕಡೆಗೆ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಎಸ್.ಸೌಂದರ್ಯ ಬಳ್ಳಾರಿಗರನ್ನೂ ಸಹ ಸಂಗೀತದ ಸಾಗರದಲ್ಲಿ ತೇಲಿಸಲಿದ್ದಾರೆ. ಸರ್ವ ಸಂಗೀತಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬಳ್ಳಾರಿ ಮ್ಯೂಸಿಕ್ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ಜೆ.ಗುಪ್ತಾ ಮತ್ತು ಕಾರ್ಯದರ್ಶಿ ಸಂಧ್ಯಾರಾವ್ ಕೋರಿದ್ದಾರೆ.