ಮನವೊಲಿಕೆ ಕಸರತ್ತು ಆರಂಭ: ಎಂಟಿಬಿ ನಿವಾಸಕ್ಕೆ ಡಿಕೆಶಿ ಭೇಟಿ

ಬೆಂಗಳೂರು: ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಸತಿ ಸಚಿವ ಎಂಬಿಟಿ ನಾಗರಾಜ್ ಅವರ ನಿವಾಸಕ್ಕೆ ಶನಿವಾರ ಬೆಳಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. 

    ಶುಕ್ರವಾರ ನಡೆದ ವಿಧಾನಸಭೆಯ ಕಲಾಪದಲ್ಲಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ಸ್ವಯಂ ಹೇಳಿಕೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದೀಗ ಮೈತ್ರಿ ಸರ್ಕಾರ  ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದು, ಅವರ ಸೂಚನೆಯ ಮೇರೆಗೆ  ಡಿಕೆಶಿ ಅತೃಪ್ತರ ಮನವೊಲಿಕೆ ಮಾಡಲು ಕಣಕ್ಕಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ  ಡಿ.ಕೆ. ಶಿವಕುಮಾರ್ ಅವರು ಎಂಟಿಬಿ ನಾಗರಾಜ್ ಅವರ ನಿವಾಸಕ್ಕೆ ಬಂದಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಎಂಟಿಬಿ ನಿವಾಸಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರೊಂದಿಗೆ ಭೇಟಿ ನೀಡಿದ ಶಿವಕುಮಾರ್, ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿ ಎಂಬಿಟಿ ಅವರ ಮನವೊಲಿಸಿದ್ದಾರೆ ಎನ್ನಲಾಗಿದೆ.  ಈ ವೇಳೆ ನಾಗರಾಜ್ ಅವರು ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಿಮ್ಮ ಎಲ್ಲಾ ಸಮಸ್ಯೆ, ಬೇಸರವನ್ನು ಸರಿಪಡಿಸಲಾಗುವುದು. ಇನ್ನು ಮುಂದೆ ನಿಮಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಡಿಕೆಶಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಎಂಟಿಬಿ ನಾಗರಾಜ್ ಮತ್ತು ಡಾ. ಸುಧಾಕರ್ ಬುಧವಾರ ಸ್ಪೀಕರ್ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರು ಅತೃಪ್ತ ಶಾಸಕರೊಂದಿಗೆ ಮುಂಬೈಗೆ ತೆರಳದೆ ಬೆಂಗಳೂರಿನಲ್ಲಿಯೇ ಉಳಿದಿದ್ದರು. ಒಂದು ಹಂತದಲ್ಲಿ ಎಂಟಿಬಿ ನಾಗರಾಜ್, ತಮಗೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು.