ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸಿ: ಡಾ. ವಿ. ರಾಮ್ ಪ್ರಸಾತ್ ಮನೋಹರ್
Be careful not to lapse grants: Dr. V. Ram Prasat Manohar
ಧಾರವಾಡ 16: ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯದ ಹಂತಕ್ಕೆ ಬಂದಿದ್ದು, ಸರ್ಕಾರದಿಂದ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಲ್ಯಾಪ್ಸ್ ಆಗದಂತೆ ಬಳಸಬೇಕು. ಮತ್ತು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು. ಮುಖ್ಯವಾಗಿ ಫಲಾನುಭವಿಗಳ ಆಧಾರಿತ ಯೋಜನೆಗಳ ಕುರಿತು ಪರಿಣಿತ ತಂಡಗಳಿಂದ ಸೋಶಿಯೊಎಕನಾಮಿಕ್ ಅಧ್ಯಯನ ಕೈಗೊಂಡು ಯೋಜನೆಗಳ ಸುಧಾರಣೆ ಮತ್ತು ಬೇಡಿಕೆಗಳ ಕುರಿತು ವರದಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಹಿರಿಯ ಐಎಎಸ್ ಅಧಿಕಾರಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.
ಅವರು ಇಂದು (ಡಿ.16) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ 2025-26 ನೇ ಸಾಲಿನ ನವೆಂಬರ್ 2025 ರ ಅಂತ್ಯಕ್ಕೆ ಕೊನೆಗೊಂಡಂತೆ ಮಾಸಿಕ ಕೆ.ಡಿ.ಪಿ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಪ್ರಸಕ್ತ ಸಾಲಿನ ಕಾಮಗಾರಿ, ಯೋಜನೆಗಳು ಕಾಲಮಿತಿಯಲ್ಲಿ ಅನುಷ್ಠಾನವಾಗಬೇಕು. ಬಿಡುಗಡೆ ಆದ ಅನುದಾನ ಲ್ಯಾಪ್ಸ್‌ಗೊಂಡರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆ ಮಾಡಲಾಗುತ್ತದೆ. ಕಾಮಗಾರಿ ಅನುಷ್ಠಾನದಲ್ಲಿ ಸರಕಾರಿ ನಿಯಮಗಳ ಉಲ್ಲಂಘನೆ ಆಗಬಾರದು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು, ಸಮರ್ಕವಾಗಿ ಜಾರಿ ಆಗಬೇಕು. ಈ ಕುರಿತು ನಮ್ಮ ಕಚೇರಿಗೆ ವರದಿ ಸಲ್ಲಿಸಬೇಕೆಂದು ಡಾ. ರಾಮ್ ಪ್ರಸಾತ್ ಮನೋಹರ್ ವಿ. ಅವರು ನಿರ್ದೇಶನ ನೀಡಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಜಲ ಸಂಪನ್ಮೂಲ, ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಹಕಾರ ಇಲಾಖೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಫಲಾನುಭವಿ ಆಧಾರಿತ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವುಗಳಿಂದ ಆರ್ಥಿಕ ಪ್ರಗತಿ ಮತ್ತು ಸ್ವಾಲಂಭಿ ಬದುಕಿಗೆ ಸಾಧ್ಯವಾಗುತ್ತಿದೆ. ಈ ಕುರಿತು ಫಲಾನುಭವಿಗಳ ಅಭಿಪ್ರಾಯ ಮತ್ತು ಯೋಜನೆಗಳ ಅನುಷ್ಠಾನದ ಕುರಿತು ವಿಸೃತ ಅಧ್ಯಯನದ ಅಗತ್ಯವಿದೆ. ಶೈಕ್ಷಣಿಕ ಪರಿಣಿತರ, ಸಂಶೋಧಕರಿಂದ ಅಧ್ಯಯನ ಕೈಗೊಂಡು ವರದಿ ಸಲ್ಲಿಸುವಂತೆ ಕೃಷಿ ಇಲಾಖೆಯಿಂದ ಕ್ರಮವಹಿಸಬೇಕೆಂದು ಅವರು ಸೂಚಿಸಿದರು.
ಪಂಚಾಯತ ರಾಜ್ ಇಲಾಖೆಯಿಂದ ಅನುಮೋದನೆ ಪಡೆದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿದ್ದು, 143 ಕಾಮಗಾರಿಗಳ ಪ್ರಗತಿಯನ್ನು ನಿಯಮಾನುಸಾರ ಮುಕ್ತಾಯಗೊಳಿಸಬೇಕು ಎಂದರು.
ಜಿಲ್ಲೆಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ಕೃಷಿ ಮತ್ತು ಕೃಷಿಗೆ ಪೂರಕವಾದ ಪಶುಸಂಗೋಪನೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಎಪಿಎಂಸಿ ಇಲಾಖೆಗಳು ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಇಲಾಖೆಗಳ ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಬೇಕು. ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರದ ವಿಸ್ತೀರ್ಣವಾಗಬೇಕು. ಎಲ್ಲ ಅಧಿಕಾರಿಗಳು ಸೇರಿ ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಗಳಾದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ರಾಷ್ಟ್ರೀಯ ಆರೋಗ್ಯ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ರಾಷ್ಟ್ರೀಯ ಯೋಜನೆಗಳ ಕುರಿತು ಪ್ರತಿ ತಿಂಗಳು ಪ್ರಗತಿ ಪರೀಶೀಲಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ಸಿಗುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಅವರು ತಿಳಿಸಿದರು.
ಮೀನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆಗಳ ಕಾರ್ಯ ಚಟುವಟಿಕೆಗಳ ವಿಸ್ತರಣೆಯಾಗಬೇಕು. ಜಿಲ್ಲೆಯಲ್ಲಿ ಇಲಾಖೆಗಳ ಫಲಾನುಭವಿಗಳ ಸಂಖ್ಯೆ ಕಡಿಮೆಯಿರುವದರಿಂದ ತ್ವರೀತವಾಗಿ ಯೋಜನೆಗಳ ಅನುಷ್ಠಾನವಾಗಬೇಕು. ಅಧಿಕಾರಿಗಳು ಅನುದಾನ, ಗುರಿ ಎಂದು ಸಮಯ ಕಳೆಯದೇ ಸ್ವತಃ ರೈತರ ಜಮೀನುಗಳಿಗೆ ಭೇಟಿ ನೀಡಿ, ತಿಳುವಳಿಕೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ರೈತರು ಕೆಲವು ಬೆಳೆಗಳನ್ನು ಏಕಸ್ವಾಮ್ಯವಾಗಿ ಬೆಳೆಯುತ್ತಿದ್ದಾರೆ. ಇದರಿಂದ ರೈತರಿಗೆ ಉತ್ತಮ ಬೆಲೆ ಹಾಗೂ ಸಕಾಲಕ್ಕೆ ಮಾರಾಟ ಮಾಡುವುದು ತೊಂದರೆಯಾಗುತ್ತಿದೆ. ಕೃಷಿ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ರೈತರಿಗೆ ಪ್ರತಿ ವರ್ಷ ಬೆಳೆಗಳ ಬದಲಾವಣೆಯಿಂದ ಆಗುವ ಲಾಭದ ಬಗ್ಗೆ ಮತ್ತು ಮಿಶ್ರ ಬೆಳೆಗಳನ್ನು ಬೆಳೆಯುವದರಿಂದ ಭೂಮಿಯ ಫಲಿತಾಂಶ ಹೆಚ್ಚಳದೊಂದಿಗೆ ಕೃಷಿ ಉತ್ಪನ್ನಗಳನ್ನು ಹೆರಳವಾಗಿ ಪಡೆಯಬಹುದು ಎಂಬುವುದನ್ನು ಸ್ವತಃ ಮನವಿರಿಕೆ ಮಾಡಬೇಕು. ಸರ್ಕಾರ ಇಲಾಖೆ ಹಾಗೂ ಅಧಿಕಾರಿಗಳನ್ನು ಕೇವಲ ಅನುದಾನ ಬಳಸಿ ಗುರಿ ಸಾಧಿಸಲು ನೇಮಿಸಿಲ್ಲ. ಕೃಷಿ ಮತ್ತು ಉತ್ಪನ್ನಗಳ ಮೌಲ್ಯವರ್ಧನೆಗೆ ಆಧ್ಯತೆ ನೀಡಬೇಕೆಂದು ಅವರು ನಿರ್ದೇಶಿಸಿದರು.
ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳನ್ನು ಬರೀ ಯಾಂತ್ರಿಕವಾಗಿ ಅನುಷ್ಠಾನಗೊಳಿಸದೇ ಅದರ ಉಪಯುಕ್ತತೆ ಮತ್ತು ಲಾಭವನ್ನು ಜನರಿಗೆ ತಲುಪುವಂತೆ ಮಾಡುವಲ್ಲಿ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯಿಂದ ಅನೇಕ ಸಮಸ್ಯೆಗಳಿಗೆ ನಾವು ಪರಿಹಾರ ಕಾಣಬಹುದಾಗಿದೆ ಎಂದು ಅವರು ತಿಳಿಸಿದರು.
ಎಸ್.ಎಸ್.ಎಲ್.ಸಿ ಫಲಿತಾಂಶ ಕಳೆದ ವರ್ಷಕ್ಕಿಂತ ಈ ವರ್ಷ ಇನ್ನು ಹೆಚ್ಚು ಸುಧಾರಣೆ ಆಗಬೇಕು. ಈ ವರ್ಷವೂ ಈಗಿನಿಂದಲೇ ನಿಯಮಿತ ಪಾಠ, ಅಭ್ಯಾಸ ಆಗಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆಗಳಲ್ಲಿ ಶೇ. ನೂರಕ್ಕೆ ನೂರರಷ್ಟು ಫಲಿತಾಂಶ ಆಗಬೇಕು. ಫಲಿತಾಂಶ ಸುಧಾರಣೆ ಆಗದಿದ್ದರೆ, ನಿಲಯಪಾಲಕರ ಮೇಲೆ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಈಗಿನಿಂದಲೇ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಮತ್ತು ಪ್ರತಿ ತಿಂಗಳು ಎಲ್ಲ ವಸತಿ ನಿಲಯಗಳಲ್ಲಿ ಇರುವ ಮಕ್ಕಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ವಿವಿಧ ಇಲಾಖೆಗಳು ರೂಪಿಸಿದ್ದ ಕ್ರಿಯಾಯೋಜನೆ ಅನುಸಾರ ನಿಗದಿಪಡಿಸಿದ ಕಾಮಗಾರಿಗಳು ಪೂರ್ಣವಾಗಿ ಜಾರಿಯಾಗಿಲ್ಲ. ನರೇಗಾ ಯೋಜನೆಯಡಿ ಹೆಚ್ಚಿನ ಉದ್ಯೋಗ ಹಾಗೂ ಜೀವನೋಪಾಯ ಹೆಚ್ಚಿಸಲು ಮೀನುಗಾರಿಕೆ, ಅರಣ್ಯ, ತೋಗಾರಿಕೆ, ರೇಷ್ಮೆ ಮತ್ತು ಪಂಚಾಯತ ರಾಜ್ ಇಂಜೀನೀಯರಿಂಗ್ ಇಲಾಖೆಗಳ ಕಾರ್ಯಕ್ರಮ ಮತ್ತು ಕಾಮಗಾರಿಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಲು ಅವರು ಸೂಚಿಸಿದರು. ಮತ್ತು ಜನೆವರಿ ತಿಂಗಳೊಳಗಾಗಿ ನರೇಗಾ ಯೋಜನೆಯು ಅನುಮೊದಿತ ಕ್ರಿಯಾಯೋಜನೆ ಅನುಸಾರ ಕಾಮಗಾರಿಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಅವರು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರ ಬಗ್ಗೆ ವಿಶೇಷ ಕಾಳಜಿ ಮತ್ತು ಅಭ್ಯಾಸ ಹಾಳಿಗಳನ್ನು ನೀಡಿ, ಸೂಕ್ತ ತರಬೇತಿ ನೀಡಿ, ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಹೆಚ್ಚಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸುವ ಕುರಿತು ಮತ್ತು ಜಿಲ್ಲಾ ಯೋಜನಾ ವರದಿಯನ್ನು ಸಿದ್ಧಪಡಿಸುವ ಕುರಿತು ಕ್ರಮವಹಿಸಲಾಗಿದೆ. ರಾಜ್ಯ ಮತ್ತು ಜಿಲ್ಲಾ ವಲಯದಲ್ಲಿ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನವನ್ನು ಕ್ರಿಯಾಯೋಜನೆ ಅನುಸಾರ ವೆಚ್ಚ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿರುವ ಕಾಮಗಾರಿಗಳನ್ನು ಸೇರಿಸಲು ಅನುಮೋದನೆಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿ, ಅನುಮತಿ ಪಡೆಯಲಾಗಿದ್ದು, ಜನೆವರಿ ತಿಂಗಳೊಳಗೆ ನಿಗದಿತ ಗುರಿ ಸಾಧಿಸಲಾಗುವುದು ಎಂದು ಅವರು ಹೇಳಿದರು.ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಅವರು ಸ್ವಾಗತಿಸಿದರು. ಜಿಲ್ಲಾ ಪಂಚಾಯತ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಮಾರುತಿ ತಳವಾರ ವಂದಿಸಿದರು.
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ, ಇಲಾಖಾವಾರು ಕಾಮಗಾರಿ ಮತ್ತು ಕಾರ್ಯಕ್ರಮಗಳ ಪ್ರಗತಿ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪಂಚಾಯತ್ ರಾಜ್ ಮತ್ತು ಇಂಜೀನೀಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ಆರ್.ಎಮ್.ಸೊಪ್ಪಿಮಠ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಜಂಟಿ ನಿರ್ದೇಶಕ ಕೆ.ಸಿ.ಭದ್ರಣ್ಣವರ, ಮೀನುಗಾಗಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀಪಾದ ಕುಲಕರ್ಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಮ್.ಹೊನಕೇರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಾನುಮತಿ ಎಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್.ಎಚ್.ಕುಕನೂರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 