ಬಂಜಾರ ಭವನ ಕೆಲ ಪ್ರಭಾವಿಗಳಿಂದ ದುರ್ಬಳಕೆ- ಶಾಸಕ ಕೃಷ್ಣ ನಾಯ್ಕ

ಬಂಜಾರ ಭವನ ಕೆಲ ಪ್ರಭಾವಿಗಳಿಂದ  ದುರ್ಬಳಕೆ-  ಶಾಸಕ ಕೃಷ್ಣ ನಾಯ್ಕ  Banjara Bhavan being misused by some influential people - MLA Krishna Naik

ಹೂವಿನಹಡಗಲಿ 31:  ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ 2.70 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಿರುವ ಬಂಜಾರ ಸಮುದಾಯ ಭವನ ಕೆಲ ಪ್ರಭಾವಿಗಳ ಸ್ವತ್ತಾಗಿದೆ. ಅದನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು. ಇಲ್ಲವೇ, ಟ್ರಸ್ಟ್ಗೆ ಬಿಟ್ಟುಕೊಡಲಿ ನಮಗೇನು ಅಭ್ಯಂತರವಿಲ್ಲ ಎಂದು ಶಾಸಕ ಕೃಷ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.ವಿಧಾನಸಭೆಯಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆದ ಅವರು, ಬಡ ಬಂಜಾರ ಜನರ ಮದುವೆಗಳಿಗೆ ಉಚಿತವಾಗಿ ದೊರೆಯಬೇಕಿದ್ದ ಭವನಕ್ಕೆ  ?40 ರಿಂದ ? 60 ಸಾವಿರ ರೂ. ಶುಲ್ಕ ಪಡೆಯಲಾಗುತ್ತಿದೆ. ಕಟ್ಟಡ ಸರ್ಕಾರದ್ದೇ ಆಗಿದ್ದರೂ, ಅದರ ಬಾಡಿಗೆ ಖಾಸಗಿ ವ್ಯಕ್ತಿಗಳ ಟ್ರಸ್ಟ್ಗೆ ಸೇರುತ್ತಿದೆ. ಲೆಕ್ಕಪತ್ರವೂ ಸರಿಯಾಗಿಲ್ಲ. ಈ ಅಕ್ರಮದ ಬಗ್ಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದೇನೆ. ಸದನದ ಲ್ಲೂ ಪ್ರಸ್ತಾಪಿಸಿದ್ದೇನೆ.

ಈ ಕುರಿತು ಪತ್ರ ಬರೆದು ಬರೆದು ನನ್ನ ಸಹಾಯಕರಿಗೂ ಸಾಕಾಗಿದೆ. ಸರ್ಕಾರಈ ಬಗ್ಗೆ ಸ್ಪಂದಿಸದಿದ್ದರೆ, ಸರ್ಕಾರದ ಆಸ್ತಿ ಕಂಡವರ ಪಾಲಾಗುತ್ತದೆ. ಅದನ್ನಾದರೂ ಸರ್ಕಾರ ಸ್ಪಷ್ಟಪಡಿಸಲಿ ಎಂದು ಅಸಮಾಧಾನ ಹೊರಹಾಕಿದರು.ಅದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ .ಸಿ.ಮಹಾದೇವಪ್ಪ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ರಚಿಸಲಾಗಿದ್ದ ಭವನ ನಿರ್ವಹಣಾ ಸಮಿತಿಯನ್ನು ರದ್ದುಪಡಿಸಲು ಸೂಚಿಸಿದೆ. ಅಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ನಿಗಮದ ನಿರ್ದೇಶಕರು ಮತ್ತು ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆಯ ನಿರ್ದೇಶಕರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ನಡುವೆ ಸಮುದಾಯದವರೇ ಲೆಕ್ಕಪತ್ರ ಸರಿಪಡಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರಿಂದ ಕೊಂಚ ಕಾಲಾವಕಾಶ ನೀಡಿದೆ. ಆದಷ್ಟು ಬೇಗ ವರದಿ ಕೈಸೇರಲಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.