ಬೆಂಗಳೂರು ೨೨: ರಾಜ್ಯದಲ್ಲಿ 2ನೇ ಹಂತದ ಚುನಾವಣೆ: ಮತಕೇಂದ್ರ ಸುತ್ತ ಬಿಗಿ ಬಂದೋಬಸ್ತ್​​​; 45 ಸಾವಿರ ಪೊಲೀಸರ ಕಣ್ಗಾವಲು ​

ಬೆಂಗಳೂರು ೨೨: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಾಳೆ ನಡೆಯಲಿದೆ. ಕಾಂಗ್ರೆಸ್​​ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಘಟಾನುಘಟಿ ನಾಯಕರ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದ್ದು, ಭಾರೀ ಬಿಗಿ ಬಂದೋಬಸ್ತ್​​ ನಡುವೆ ಮತದಾನ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೇ ನೋಡಿಕೊಳ್ಳಲು ಆಯೋಗ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 45 ಸಾವಿರ ಪೊಲೀಸರು ಭದ್ರತೆಗಾಗಿ ನಿಯೋಜಿಸಿದೆ.

ರಾಜ್ಯದಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕಾಂಗ್ರೆಸ್​​-ಜೆಡಿಎಸ್​​​ ಮತ್ತು ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದಿದ್ಧಾರೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಸುಮಾರು 28,028 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 5,674 ಸೂಕ್ಷ್ಮ, 22,354 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಆಯೋಗ ಒಟ್ಟು 90,997 ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನು ಚುನಾವಣಾ ಕರ್ತವ್ಯಕ್ಕಾಗಿ 1531 ವಲಯ ಸಂಚಾರಿ ಗಸ್ತು ವಾಹನಗಳು, 337 ವಲಯ ಮೇಲುಸ್ತುವಾರಿ ಸಂಚಾರಿ ಗಸ್ತು, 125 ಬಿಎಸ್‍ಪಿ ಸಂಚಾರಿ ಗಸ್ತು, 382 ಸಂಚಾರಿ ತಂಡಗಳು, 384 ಸ್ಥಿರ ಕಣ್ಗಾವಲು ತಂಡಗಳು, 5 ಸಿಆರ್‍ಪಿಎಫ್ ಪಡೆಗಳು, ಸೂಕ್ಷ್ಮ ಮತಗಟ್ಟೆಗಳಿಗೆ 912 ಸಿಆರ್​​​ಪಿಎಫ್​​​ನ ಅರ್ಧ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಮತದಾನ ವೇಳೆ  ಕಾನೂನು ಸುವ್ಯವಸ್ಥೆಗಾಗಿ 143 ಕೆಎಆರ್​​ಪಿ, 340 ಡಿಎಆರ್, ಸಿಎಆರ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಮತಕೇಂದ್ರದ ಬಳಿ ಯಾರೂ ಗುಂಪು ಸೇರದಂತೆ ನೋಡಿಕೊಳ್ಳಲಾಗುತ್ತದೆ. ಇದರ ಮೇಲೆ ನಿಗಾವಹಿಸಲು ಪಿಎಸ್‍ಐ, ಹೆಡ್‍ಕಾನ್‍ಸ್ಟೆಬಲ್, ಹೋಂಗಾರ್ಡ್ ಕಾರ್ಯನಿರ್ವಹಿಸುತ್ತಾರೆ. ಡಿವೈಎಸ್‍ಪಿ ನೇತೃತ್ವದಲ್ಲಿ ಉಪವಿಭಾಗ ಸಂಚಾರಿ ದಳಗಳನ್ನು ನಿಯೋಜಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ದಳಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಡಿವೈಎಸ್‍ಪಿ, ಹೆಡ್‍ಕಾನ್‍ಸ್ಟೆಬಲ್, ಹೋಂಗಾರ್ಡ್, ಕಾನ್‍ಸ್ಟೆಬಲ್ ಮತ್ತು ಗೃಹ ರಕ್ಷಕದಳದ ಸಿಬ್ಬಂದಿ, ಫ್ಲೈಯಿಂಗ್ ಸ್ಕ್ವಾಡ್‍ನಲ್ಲಿ ಹೆಡ್‍ಕಾನ್‍ಸ್ಟೆಬಲ್, ಗೃಹರಕ್ಷಕದಳದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸುಮಾರು 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ. ಈ ಪೈಕಿ ಶಿವಮೊಗ್ಗ, ಕಲಬುರಗಿ, ಕೊಪ್ಪಳ, ವಿಜಯಪುರ, ಉತ್ತರ ಕನ್ನಡ, ಬಳ್ಳಾರಿ, ಬೆಳಗಾವಿ ಪ್ರತಿಷ್ಠೆಯ ಕಣಗಳಾಗಿವೆ.