ಬಾಗಲಕೋಟೆ: ನಿಫಾ ಸೋಂಕು ಜ್ವರ ಹರಡದಂತೆ ಮುಂಜಾಗ್ರತ ಕ್ರಮ: ರಾಮಚಂದ್ರನ್

ಲೋಕದರ್ಶನ ವರದಿ

ಬಾಗಲಕೋಟೆ 08: ಮಾರಣಾಂಕಿತ ನಿಫಾ ವೈರಸ್ ಸೋಂಕಿನ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವದರ ಜೊತೆಗ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು.

   ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಿಫಾ ವೈರಸ್ ಕುರಿತು ಜರುಗಿದ ಜಿಲ್ಲಾ ಮಟ್ಟದ ಮುಂಜಾಗ್ರತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಾಣು ಕಂಡುಬಂದಿರುವದರಿಂದ ಜಿಲ್ಲೆಯಲ್ಲಿಯೂ ಸಹ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.  

ನಿಫಾ ವೈರಾಣು ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯ 6 ತಾಲೂಕಾ ಆಸ್ಪತ್ರೆಗಳಲ್ಲಿ ತುತರ್ು ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಬೇಕು. ಸೋಂಕಿತ ಬಾವಲಿಗಳ ಮೂಲಕ ಹರಡುತ್ತಿರುವ ಈ ವೈರಾಣು ಜ್ವರಕ್ಕೆ ಸದ್ಯದ ಮಟ್ಟಿಗೆ ಯಾವುದೇ ರೀತಿಯ ಚಿಕಿತ್ಸೆ ಅಥವಾ ಔಷಧಿ ಲಭ್ಯವಿರುವದಿಲ್ಲ ಎಂದು ತಿಳಿದುಬಂದಿದ್ದು, ನಿಫಾ ವೈರಾಣು ಸೋಂಕು ಹರಡದಂತೆ ಜಾಗೃತಿ ವಹಿಸಬೇಕಾಗಿದೆ. ಆದ್ದರಿಂದ ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು, ಗಿಡಗಳಿಂದ ಕೆಳಗೆ ಬಿದ್ದಿರುವ ಹಣ್ಣುಗಳನ್ನು ತಿನ್ನದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.

ನಿಫಾ ವೈರಾಣು ಸೋಂಕು ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೋಂಕಿತ ವ್ಯಕ್ತಿ ಮತ್ತು ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭಗಳಲ್ಲಿ ಕುರಿಗಳಿಂದ ದೂರವಿರುವುದು ಸೂಕ್ತವಾಗಿದೆ. ಸೋಂಕಿತ ಜನರ ಸಂಪರ್ಕಕ್ಕೆ ಬಂದನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು, ಹಸ್ತ ಲಾಗವ ಮಾಡುವುದನ್ನು ತಪ್ಪಿಸುವುದು, ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಮುಂಗೈ ಕುಪ್ಪಸ ಧರಿಸಬೇಕು. ಹಣ್ಣುಗಳನ್ನು ತಿನ್ನುವಾಗ ಚೆನ್ನಾಗಿ ತೊಳೆದು ಸಿಪ್ಪೆಗಳನ್ನು ಸುಲಿದು ತಿನ್ನಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ತಿಳಿಸಿದರು.

ಕೈಗಳನ್ನು ಸಂಪೂರ್ಣವಾಗಿ ಶುದ್ದೀಕರಿಸುವುದರಿಂದ ಸೋಂಕು ತಡೆಗಟ್ಟುವಿಕೆಗೆ ಬಹುಮುಖ್ಯ ಕ್ರಮವಾಗಿದೆ. ಸೋಂಕಿತ ರೋಗಿಯು ಕನಿಷ್ಠ 15 ದಿನಗಳು ಮನೆಯಲ್ಲಿ ಮತ್ತು ಚಿಕಿತ್ಸೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿರಿಸುವುದು. ಫಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ಯಾವುದೇ ರೀತಿಯ ಜ್ವರ ಕಂಡುಬಂದಲ್ಲಿ ಉದಾಸೀನ ಮಾಡದೇ ನಿಫಾ ವೈರಸ್ ಲಕ್ಷಗಳಿರುವ ಜ್ವರ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯಬೇಕು. ನೆರವಿಗಾಗಿ 104ಕ್ಕೆ ಕರೆ ಮಾಡಬಹುದಾಗಿದೆ ಎಂದು ಡಾ.ವಿಜಯ ಕಂಠಿ ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಕುಟುಂಬ ಕಲ್ಯಾಣಾಧಿಕಾರಿ ಪಟ್ಟಣಶೇಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ವಿ.ಸಿ.ಪವಾಡೆಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.