ವೈದ್ಯರ ನಿರ್ಲಕ್ಷಕ್ಕೆ ಹಸುಗೂಸು ಸಾವು:ಕುಟುಂಬಸ್ಥರ ಆರೋಪ
ಕಾಗವಾಡ 18 : ತಾಲೂಕಿನ ಮೊಳೆ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಮೂರು ತಿಂಗಳ ಹಸು-ಗುಸು ಸಾವನ್ನಪ್ಪಿರುವ ಘಟನೆಯೊಂದು ಅಥಣಿ ಪಟ್ಟಣದಲ್ಲಿ ನಡೆದಿದೆ.ಅಥಣಿ ತಾಲೂಕಿನ ಭರಮಣಕೊಡಿ ಮೂಲದ ಮಗುವಿಗೆ ನಿನ್ನೆ ಮೋಳೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನರ್ಸ್ಗಳಿಂದ ಪೋಲಿಯೋ, ಪೆಂಟಾ-1, ಐಪಿವ್ಹಿ-1, ಪಿವ್ಹಿಸಿ-1, ರೋಟಾ-1, ವೈರಸ್ ಡ್ರಾಪ್ ನೀಡಲಾಗಿತ್ತು. ರಾತ್ರಿ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅಥಣಿ ಖಾಸಗಿ ಆಸ್ಪತ್ರೆ ಮಗುವನ್ನು ದಾಖಲಿಸಲಾಗಿತ್ತು. ನಂತರ ಮಗುವನ್ನ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಮಗು ಉಸಿರು ಚೆಲ್ಲಿದೆ.ಮಗು ಕಳೆದುಕೊಂಡ ಕುಟುಂಬಸ್ಥರು ಡೋಸ್ ನೀಡಿದ ವೈದ್ಯರ ನಿರ್ಲಕ್ಷವೆ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. ಮಗುವಿಗೆ ಪ್ರಮಾಣಕ್ಕಿಂತ ಹೆಚ್ಚು ಲಸಿಕೆ ನೀಡಿದ ಪರಿಣಾಮ ಮಗು ಸಾವಣ್ಣಪ್ಪಿದೆ ಎಂದು ಮಗು ಕುಟುಂಬಸ್ಥರು ಸರ್ಕಾರಿ ವೈದ್ಯರ ವಿರುದ್ದ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಏನು ಅರಿಯದ ಹಸು-ಗುಸು ತಾಯಿಯಿಂದ ದೂರಾಗಿದೆ. ಯಾರದೋ ಎಡವಟ್ಟಿನಿಂದ ಮಗುವಿನ ಕುಟುಂಬ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ.ಮಗು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ತಾಲೂಕ ಆರೋಗ್ಯ ಅಧಿಕಾರಿ ಡಾ.ಬಸಗೌಡ ಕಾಗೆ ಪ್ರತಿಕ್ರಿಯೆ ನೀಡಿದ್ದು ಒಂದುವರೆ ತಿಂಗಳ ಮಗುವಿಗೆ ಹೃದಯ ತೊಂದರೆ ಇತ್ತು ಆದರೂ ಕೂಡಾ ಮಗುವಿಗೆ ವ್ಯಾಕ್ಸಿನ್ ನೀಡಬಹುದು, ವ್ಯಾಕ್ಸಿನ್ ನೀಡಿದಾಗ ಸ್ವಲ್ಪ ಮಟ್ಟಿಗೆ ಜ್ವರ ಬರುತ್ತವೆ. ಈಗಾಗಲೇ ನಾಲ್ಕೈದು ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗಿದೆ. ಏನು ತೊಂದರೆ ಇಲ್ಲ. ಮಗುವಿಗೆ ರಾತ್ರಿ ಜ್ವರ ಹೆಚ್ಚಾದ ಹಿನ್ನಲೆ ಆಸ್ಪತ್ರೆಗೆ ತೋರಿಸದ ಪಾಲಕರು, ಬೆಳಿಗ್ಗೆ ಅಥಣಿ ಖಾಸಗಿ ಆಸ್ಪತ್ರೆಗೆ ತೋರಿಸಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಮಾಡಲು ಮುಂದಾಗಿದ್ದು ಆಸ್ಪತ್ರೆಗೆ ಬರುಕ್ಕಿಂತ ಮೊದಲೇ ಮಗು ಸಾವನಪ್ಪಿದ್ದು ಈಗಾಗಲೇ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ ಎಂದು ಡಾ.ಬಸಗೌಡ ಕಾಗೆ ತಿಳಿಸಿದ್ದಾರೆ.