ದೇಶಪಾಂಡೆ ವಿರುದ್ಧ ಬಿಜೆಪಿ ವಾಗ್ದಾಳಿ : ಹಳಿಯಾಳಕ್ಕೆ ಹಿಡಿದ ಶನಿ ಎಂದು ಟೀಕಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
BJP Fierce attack against Deshpande
ಲೋಕದರ್ಶನ ವರದಿ
ಕಾರವಾರ 17: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಭವದ ಕೊರತೆಯಿದೆ ಎಂದಿದ್ದ ಹಳಿಯಾಳ ಶಾಸಕ ಆರಿ್ವ. ದೇಶಪಾಂಡೆ ಅವರ ಹೇಳಿಕೆಗೆ ಬಿಜೆಪಿ ಮುಖಂಡ ,ಮಾಜಿ ಶಾಸಕ ಸುನೀಲ್ ಹೆಗಡೆ ತೀವ್ರ ವಾಗ್ದಾಳಿ ಮಾಡಿದರು. ಕಾರವಾರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಮಾಡಿದ ಅವರು ಹಿರಿಯ ಕಾಂಗ್ರೆಸ್ ನಾಯಕನ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶಪಾಂಡೆ ಅವರು ಒಂಬತ್ತು ಬಾರಿ ಶಾಸಕರಾಗಿದ್ದರೂ, ಜಿಲ್ಲೆಯ ಅಭಿವೃದ್ಧಿಯನ್ನು ಕ್ಷೀಣ ಗೊಳಿಸಿದ್ದಾರೆ. ರಾಮನಗರ ಅನಮೋಡ ರಸ್ತೆಯ ದುಃಸ್ಥಿತಿಯೇ ಅವರ ವೈಫಲ್ಯಕ್ಕೆ ಸಾಕ್ಷಿ. ಪ್ರತಿ ವರ್ಷ ರಸ್ತೆ ದುರಸ್ತಿಯನ್ನು ಹಬ್ಬದಂತೆ ಮಾಡುತ್ತಾ, ಹಣ ಲೂಟಿ ಮಾಡಲಾಗುತ್ತಿದೆ. ಬೆಳೆ ವಿಮೆ ಕಷ್ಟಕರ : ಹಳಿಯಾಳ ಜೊಯಿಡಾದಲ್ಲಿ ಮಳೆ ಮಾಪನ ಕೇಂದ್ರಗಳು ಹಾಳಾಗಿವೆ. ಮಳೆ ಮಾಪನ ನಿರ್ವಹಣೆಗೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಂಬೇವಾಡಿ ರೈಲು ನಿಲ್ದಾಣ ತಮ್ಮ ಸಾಧನೆ ಎನ್ನುವ ಆರಿ್ವ. ದೇಶಪಾಂಡೆ ಅವರು, ಅಂಬೇವಾಡಿಯಿಂದ ಹಳೆ ದಾಂಡೇಲಿತನಕ ರೈಲ್ವೆ ಸಂಚಾರ ಯಾಕೆ ತರಲಿಲ್ಲ ? ಎಂದು ಪ್ರಶ್ನಿಸಿದರು. ಹಳೆ ದಾಂಡೇಲಿತನಕ ರೈಲು ಹಳಿ ಮಾರ್ಗ ಇತ್ತು. ಹಳಿ ಇದ್ದ ಮಾರ್ಗದ ಅಕ್ಕ ಪಕ್ಕ, ಹಳಿ ಬಳಿಯೇ ಆಶ್ರಯ ಮನೆಗಳನ್ನು ಹಂಚಿ ಮಾಜಿ ಸಚಿವ ,ಹಾಲಿ ಸಚಿವ ದೇಶಪಾಂಡೆ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು. ಸಚಿವ ಸ್ಥಾನದ ದಾಹ, ಜಿಲ್ಲೆಗೆ ಅನ್ಯಾಯ: ದೇಶಪಾಂಡೆ ಅವರು ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾಗ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ. ಒಂದು ವಿಶ್ವವಿದ್ಯಾಲಯ, ಹಾಲಿನ ಡೇರಿ ಅಥವಾ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಅವರಿಂದ ಸಾಧ್ಯವಾಗಿಲ್ಲ.
ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳನ್ನು ಧಾರವಾಡ ಅಥವಾ ಹುಬ್ಬಳ್ಳಿಗೆ ಕಳುಹಿಸಲಾಗುತ್ತಿದೆ. ದಾಂಡೇಲಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಪ್ರವಾಸೋದ್ಯಮ ಮಾಹಿತಿ ಕೇಂದ್ರ ಮತ್ತು ಯಾತ್ರಿ ನಿವಾಸಗಳು ಬಡವರಿಗೆ ಪ್ರಯೋಜನವಾಗದೆ ಪಾಳುಬಿದ್ದಿವೆ. ಕೈಗಾರಿಕಾ ಮಂತ್ರಿಯಾಗಿದ್ದಾಗ ಹೊಸ ಕೈಗಾರಿಕೆ ತರುವುದಿರಲಿ , ಇದ್ದ ಎರಡು ಕಾರ್ಖಾನೆಗಳು ಮುಚ್ಚಲು ದೇಶಪಾಂಡೆ ಅವರೇ ಕಾರಣ" ಎಂದು ಸುನೀಲ್ ಹೆಗಡೆ ಕಿಡಿಕಾರಿದರು. ಆತ್ಮಾವಲೋಕನ ಮಾಡಿಕೊಳ್ಳಲಿ: ಕಳೆದ 45 ವರ್ಷಗಳಿಂದ ಹಳಿಯಾಳ ಕ್ಷೇತ್ರಕ್ಕೆ ದೇಶಪಾಂಡೆ ಅವರ ರೂಪದಲ್ಲಿ ’ಶನಿ’ ಗಂಟುಬಿದ್ದಿದೆ. ಭ್ರಷ್ಟಾಚಾರದ ಮತ್ತೊಂದು ರೂಪವೇ ದೇಶಪಾಂಡೆ. ಸರ್ಕಾರಿ ಆಸ್ತಿ ಅತಿಕ್ರಮಣಗಳಿಗೆ ಕಡಿವಾಣ ಇಲ್ಲವಾಗಿದೆ. ಕಾಗೇರಿ ಅವರು ರೈತರಿಗೆ ಬೆಳೆ ವಿಮೆ ಕೊಡಿಸಿದ್ದಾರೆ ಮತ್ತು ನೆಟ್‌ವರ್ಕ್ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕಾಗೇರಿ ಅವರನ್ನು ಟೀಕಿಸುವ ಮೊದಲು ದೇಶಪಾಂಡೆ ಅವರು ತಮ್ಮ ಕ್ಷೇತ್ರದ ರಸ್ತೆಗಳನ್ನು ಶಿರಸಿ-ಸಿದ್ದಾಪುರದ ರಸ್ತೆಗಳಿಗೆ ಹೋಲಿಸಿ ನೋಡಲಿ ಮತ್ತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು. ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟ ಅವರು ಮಾತನಾಡಿ, ಕಾಗೇರಿ ಅವರ ಕುರಿತು ದೇಶಪಾಂಡೆ ಆಡಿರುವ ಮಾತುಗಳು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿವೆ. ಕಾಗೇರಿ ಅವರು ಸಂಸದರಾಗಿ ಎಲ್ಲಾ ಜನರಿಗೆ ಲಭ್ಯವಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಮಾರಕ ಯೋಜನೆಗಳನ್ನು ತಂದಾಗ, ಅವುಗಳನ್ನು ಕೇಂದ್ರ ಮಟ್ಟದಲ್ಲಿ ತಡೆಹಿಡಿಯುವಲ್ಲಿ ಸಂಸದ ವಿಶ್ವೇಶ್ವರ ಕಾಗೇರಿ ಅವರ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಕಂಡರೆ ಭಯ ಶುರುವಾಗಿದೆ.
ಬಿಜೆಪಿ ಸಂಘಟನೆ ಜಿಲ್ಲೆಯಲ್ಲಿ ಸದೃಢವಾಗಿದ್ದು, ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿದೆ ಎಂದು ತಿರುಗೇಟು ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬ್ಳೆ, ಸೂರಜ್ ಸೋನಿ, ನಾಗೇಶ ಕುರುಡೇಕರ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 