ಬಿಜೆಪಿ ಗೆಲುವು ಸರ್ಕಾರದ ಸಾಧನೆಗೆ ಸಂದ ಮನ್ನಣೆ- ಅರವಿಂದ ಲಿಂಬಾವಳಿ

ಅರವಿಂದ ಲಿಂಬಾವಳಿ

ಬೆಂಗಳೂರು, ಡಿ 9-ಉಪ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ರಾಜ್ಯದಲ್ಲಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗೆ ಸಂದ ಮನ್ನಣೆಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಪ ಚುನಾವಣೆ ಉಸ್ತುವಾರಿ ಅರವಿಂದ ಲಿಂಬಾವಳಿ ಹೇಳಿದ್ದಾರೆ. 

ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಪಕ್ಷದ ಸ್ಥಿರ ಸರ್ಕಾರದ ಅನಿವಾರ್ಯತೆ ಹಾಗೂ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರುವುದು ಅಭಿವೃದ್ಧಿಗೆ ಸಹಕಾರಿ ಎಂಬ ಎರಡು ವಿಷಯಗಳನ್ನು ಮತದಾರರ ಮುಂದಿಟ್ಟು ಬಿಜೆಪಿ ಉಪ ಚುನಾವಣೆ ಎದುರಿಸಿತ್ತು. ಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದ್ದು,  ಮತದಾರರು ಸರ್ಕಾರವನ್ನು ಸದೃಢಗೊಳಿಸಿದ್ದಾರೆ. ಇದಕ್ಕಾಗಿ ಮತದಾರರೆಲ್ಲರಿಗೂ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು. 

ಇತಿಹಾಸದಲ್ಲಿ ಮೊದಲ ಬಾರಿಗೆ ಕೆ.ಆರ್.ಪೇಟೆಯಲ್ಲಿ ಗೆಲ್ಲುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅರಳಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಈ ಮೂಲಕ ಎರಡೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ಬಂದಿದೆ. ಒಟ್ಟಾರೆ, ಪಕ್ಷಕ್ಕೆ ಶಕ್ತಿ ಕಡಿಮೆ ಇದ್ದ ಕಡೆಯೂ ಬಲ ಬಂದಿದೆ ಎಂದು ಅವರು ಹೇಳಿದರು.  

ಮುಖ್ಯಮಂತ್ರಿ ಯಡಿಯೂರಪ್ಪ ಅವರ ದಣಿವರಿಯದ ಪ್ರಚಾರ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪರಿಶ್ರಮದ ಪ್ರಚಾರದಿಂದ ಬಿಜೆಪಿ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಪಾಲ್ಗೊಂಡ ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಪಕ್ಷ ಧನ್ಯವಾದ ಸಲ್ಲಿಸುತ್ತದೆ ಎಂದು ಅವರು ಹೇಳಿದ್ದಾರೆ. 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸಿದವರನ್ನು  ಅನರ್ಹರು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪ್ರಚಾರ ಮಾಡಿದರು. ಜನರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿರುವುದರಿಂದ ಅನರ್ಹರು ಎಂಬ ಪದ ಬಳಕೆ ಮಾಡುವುದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಿಲ್ಲಿಸಬೇಕು ಎಂದು ಅರವಿಂದ ಲಿಂಬಾವಳಿ ಒತ್ತಾಯಿಸಿದರು. 

ಯುಎನ್‍ಐ ಎಸ್‍ಎಲ್‍ಎಸ್ 1936