ಕುಮಟಾ ಹೊಸ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಕಿರುಕುಳ
Auto drivers harassed at Kumta new bus stand
ಕಾರವಾರ 06: ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಸ್ಥಳೀಯ ಉಪ್ಪಾರಕೇರಿ ವಾರ್ಡ್ ನ ಆಟೋರಿಕ್ಷಾ ಚಾಲಕರಿಗೆ ಬಾಡಿಗೆ ಹಚ್ಚಲು ಅವಕಾಶ ನೀಡದೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಜೈ ಭಗೀರಥ ಆಟೋರಿಕ್ಷಾ ಚಾಲಕ ಮಾಲಕರ ಸಂಘವು ಕಾರವಾರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ದೂರು ಸಲ್ಲಿಸಿದ್ದಾರೆ. ಮನವಿಯಲ್ಲಿ ಉಪ್ಪಾರಕೇರಿ ಸ್ಥಳೀಯ ನಿವಾಸಿಗಳು ಸುಮಾರು 30 ಆಟೋರಿಕ್ಷಾಗಳನ್ನು ಹೊಂದಿದ್ದಾರೆ. ಕುಮಟಾದ ಹಳೆಯ ಬಸ್ ನಿಲ್ದಾಣವನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದಾಗ, ಹಳೆ ಬಸ್ ನಿಲ್ದಾಣದ 60 ಆಟೋಗಳು, ಮಾಸ್ತಿ ಕಟ್ಟಿ ಸ್ಟ್ಯಾಂಡ್ನ 32 ಆಟೋಗಳು ಮತ್ತು ಉಪ್ಪಾರಕೇರಿಯ 14 ಆಟೋಗಳು ಒಟ್ಟು ಸೇರಿ 106 ಆಟೋಗಳಿಗೆ ಬಸ್ ನಿಲ್ದಾಣದೊಳಗೆ ಪಾಳಿ ಹಚ್ಚಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ನಂತರ, ಉಪ್ಪಾರಕೇರಿಯ ಯಾವುದೇ ಆಟೋಗಳಿಗೆ ಒಳಗೆ ಅವಕಾಶ ನೀಡದೆ ಹಳೆಯ ಬಸ್ ನಿಲ್ದಾಣದ ಚಾಲಕರು ತಡೆದಿದ್ದಾರೆ. ಕಳೆದ 8-10 ವರ್ಷಗಳಿಂದ ಅವಕಾಶ ಕೇಳುತ್ತಿದ್ದರೂ ದೌರ್ಜನ್ಯ ಮುಂದುವರೆದಿದೆ ಎಂದು ಸಂಘ ದೂರಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ, ಸಿಪಿಐ ಮತ್ತು ಪಿಎಸ್‌ಐ ಸಭೆ ನಡೆಸಿ ಅವಕಾಶ ನೀಡಲು ಸೂಚಿಸಿದ್ದರು. ಆದರೆ, ಮತ್ತೊಂದೆಡೆ ಹಲ್ಲೆಗೆ ಯತ್ನಿಸಿದಾಗ ಎರಡೂ ಕಡೆಯವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ನ್ಯಾಯಾಲಯದಲ್ಲಿ ಮೂರು ವರ್ಷಗಳವರೆಗೆ ಕೇಸ್ ವಿಚಾರಣೆಗೆ ಬರದಂತೆ ತಡೆಯುತ್ತಿದ್ದಾರೆ ಎಂದು ದೂರಿದರು. ಪ್ರಸ್ತುತ ಬಸ್ ನಿಲ್ದಾಣದೊಳಗೆ ಇರುವ ಆಟೋಗಳ ಪೈಕಿ ಶೇಕಡಾ 50 ರಷ್ಟು ಆಟೋಗಳು ಕಾಗಲ್, ಬಾಡ, ಹೆಗಡೆ, ವಾಲ್ಗಳ್ಳಿ, ಹಳದಿಪುರ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳು ನಗರದಿಂದ ಹೊರಗಿನವುಗಳಾಗಿವೆ. ಸ್ಥಳೀಯರಿಗೆ ಅವಕಾಶ ನೀಡದೆ, ಹೊರಗಿನವರಿಗೆ 3 ರಿಂದ 4 ಲಕ್ಷ ರೂ. ಹಣ ಪಡೆದು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಂಘಟಕರು ಆರೋಪಿಸಿದ್ದಾರೆ. ಒಬ್ಬ ವ್ಯಕ್ತಿ 10 ರಿಂದ 12 ಆಟೋಗಳನ್ನು ಖರೀದಿಸಿ, ಬಸ್ ನಿಲ್ದಾಣದೊಳಗೆ ಡ್ರೈವರ್ ಗಳ ಮೂಲಕ ಪಾಳಿ ಹಚ್ಚಿ ಹಣ ಗಳಿಸುತ್ತಿದ್ದಾರೆ. ಆದರೆ ನಮಗೆ ಅವಕಾಶ ನೀಡುತ್ತಿಲ್ಲ. ಕಾನೂನಿನ ಪ್ರಕಾರ ಒಬ್ಬ ಚಾಲಕ ಎಲ್ಲಿ ಬೇಕಾದರೂ ಬಾಡಿಗೆ ಹಚ್ಚಲು ಅವಕಾಶವಿದ್ದರೂ, ಸ್ಥಳೀಯರಿಗೆ ದುಡಿಯಲು ಅವಕಾಶ ನೀಡದೆ ತೊಂದರೆ ನೀಡುತ್ತಿದ್ದಾರೆ. ಹತ್ತು ದಿನಗಳ ಹಿಂದೆ ಸಿಪಿಐ ಅವರಿಗೆ ಮನವಿ ಮಾಡಿದಾಗ, ಅವರು ಕೂಡಲೇ ಸ್ಪಂದಿಸಿ ಉಪ್ಪಾರಕೇರಿ ಚಾಲಕರಿಗೆ ಬಸ್ ನಿಲ್ದಾಣದೊಳಗೆ ಬಾಡಿಗೆ ಹಚ್ಚಲು ಅವಕಾಶ ಕಲ್ಪಿಸಿದ್ದರು. ಆದರೆ, ಇದರ ಬೆನ್ನಲ್ಲೇ ಮತ್ತೆ ಶಾಸಕರು ಮತ್ತು ತಹಶೀಲ್ದಾರರಿಗೆ ಅರ್ಜಿ ನೀಡಿ ಸಿಪಿಐ ಮೇಲೆ ಒತ್ತಡ ಹೇರಲಾಗಿದೆ. ಈ ಸಂಬಂಧ ಒಂದು ವಾರದೊಳಗೆ ಸಭೆ ಕರೆದು ತೀರ್ಮಾನಿಸುವುದಾಗಿ ಸಿಪಿಐ ತಿಳಿಸಿದ್ದಾರೆ ಎಂದು ಸಂಘದವರು ಹೇಳಿದ್ದಾರೆ. ಅಧಿಕಾರಿಗಳು ಅವಕಾಶ ನೀಡಿದರೂ, ಬಸ್ ನಿಲ್ದಾಣದೊಳಗಿನ ಕೆಲ ಚಾಲಕರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನ್ಯಾಯ ಸಿಗದೇ ಇದ್ದರೆ ಧರಣಿ ಎಚ್ಚರಿಕೆ : ಕಾನೂನಿಗೆ ಗೌರವ ನೀಡಿ ಇಲ್ಲಿಯವರೆಗೆ ಬಂದಿದ್ದೇವೆ. ತಹಸೀಲ್ದಾರರು ಕರೆದ ಸಭೆಯಲ್ಲಿ ನಮಗೆ ನ್ಯಾಯ ಸಿಗದೇ ಇದ್ದಲ್ಲಿ, ನಾವು ನಮ್ಮ ಹೆಂಡತಿ ಮಕ್ಕಳೊಂದಿಗೆ ಬಸ್ ನಿಲ್ದಾಣದೊಳಗೆ ಕುಳಿತು ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಸಂಘದವರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ಮಾಡುವಂಥ ಸನ್ನಿವೇಶ ನಿರ್ಮಾಣವಾಗದಂತೆ ಸೂಕ್ತ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಂಘವು ಜೈ ಭಗೀರಥ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಲಿಖಿತ ಮನವಿ ಮಾಡಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 