ವಿಶ್ವವಿದ್ಯಾಲಯಗಳ ಮುಚ್ಚುವ ಯತ್ನ : ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

Attempt to close universities: protest against the move of the government

ವಿಶ್ವವಿದ್ಯಾಲಯಗಳ ಮುಚ್ಚುವ ಯತ್ನ : ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ  

ಬೆಳಗಾವಿ 18: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಎಬಿವ್ಹಿಪಿ ಕಾರ‌್ಯಕರ್ತರು ನಗರದದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.  ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಜಮಾವಣೆಗೊಂಡ ಕಾರ‌್ಯಕರ್ತರು ಬಳಿಕ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ವಿಶ್ವವಿದ್ಯಾಲಯಗಳ ಉಳಿವಿಗಾಗಿ ಭಿಕ್ಷಾಟನೆ ನಡೆಸಿದರು. ಅಲ್ಲದೆ ಈ ಕುರಿತು ಸರಕಾರವನ್ನು ಒತ್ತಾಯಿಸಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರಗಳು, ಅಲ್ಲಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ, ಅಂತಹ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯಗಳನ್ನ ನೀಡುವುದು ಸರ್ಕಾರಗಳ ಅದ್ಯ ಕರ್ತವ್ಯ, ಆದರೆ ಕರ್ನಾಟಕ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳನ್ನು ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.  

ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಉಪಸಮಿತಿಯು ಆರ್ಥಿಕ ಹಾಗೂ ಮೂಲಭೂತ ಸೌಲಭ್ಯಗಳ ನೆಪವನ್ನು ಹೇಳಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಸರ್ಕಾರಗಳು ವಿಶ್ವವಿದ್ಯಾಲಯಗಳ ಸ್ಥಾಪನೆ ಹಾಗೂ ಮುಚ್ಚುವ ಮನಸೋ ಇಚ್ಛೆ ಕಾರ್ಯದಿಂದ ವಿಶ್ವವಿದ್ಯಾಲಯಗಳ ಮೇಲೆ ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲೆ ಇರುವ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ವಿಶ್ವವಿದ್ಯಾಲಯಗಳ ಕುರಿತು. ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಶಿಕ್ಷಣ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಬೇಕೆ ಹೊರತು ರಾಜಕೀಯ ಕೇಂದ್ರಿತ ನಿರ್ಧಾರಗಳು ಆಗಬಾರದು ಎಂಬುದು ಎಬಿವಿಪಿಯ ಆಶಯಾಗಿದೆ.  

ಸಾಮಾನ್ಯವಾಗಿ 10,000 ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯಗಳು ಇರಬೇಕೆಂಬುವುದು ಆದರ್ಶವಾದ ವಿಚಾರವಾಗಿದೆ. ಆದರೆ ನಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರ, ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 200 ಕಿಮೀ ವಿಧ್ಯಾರ್ಥಿಗಳು ಪ್ರಯಾಣ ಮಾಡಬೇಕು, ಇಂತಹ ಸಮಸ್ಯೆ ಪರಿಹಾರಕ್ಕೆ ಹೊಸ ವಿವಿಗಳು ಸಹಕಾರಿಯಾಗಬೇಕು, ಯಾವುದೇ ಸರ್ಕಾರಗಳು ಘೋಷಣೆ ಮಾಡಿದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸಬೇಕೆ ಹೊರತು ಅತಂತ್ರಗೊಳಿಸಬಾರದು, ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ರಾಜ್ಯ ಸರ್ಕಾರ ಎರಡು ವರ್ಷ ಕಳೆದರೂ ಸಹಿತ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಕಿಂಚಿತ್ತು ಗಮನಕೊಡದೆ ಈಗ ಮೂಲಭೂತ ಸೌಲಭ್ಯಗಳ ನೆಪವೊಡ್ಡಿ ಮುಚ್ಚುತ್ತಿರುವುದನ್ನು ನೋಡಿದರೆ ಸರ್ಕಾರ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.  

ರಾಜ್ಯ ಸರ್ಕಾರ ಕೂಡಲೇ ವಿಶ್ವವಿದ್ಯಾಲಯಗಳನ್ನ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲಭೂತ ಸೌಲಭ್ಯಕ್ಕೆ ಅನುದಾನವನ್ನು ನೀಡಿ ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕಾಗಿ ಅನುದಾನ ನೀಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ ಎಂದು ಸರಕಾರಕ್ಕೆ ರವಾನಿಸಲಾದ ಮನವಿಯಲ್ಲಿ ತಿಳಿಸಲಾಗಿದೆ. ನೂರಾರು ಕಾರ‌್ಯಕರ್ತರು ಭಾಗವಹಿಸಿದ್ದರು.