ಹಾನಗಲ್ ಮತ್ತು ಶಿಗ್ಗಾಂವಿಯ ವಿವಿಧ ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳ ಮೇಲೆ ದಾಳಿ

Attacks on various shops selling tobacco products in Hanagal and Shigaonvi

ಹಾನಗಲ್ ಮತ್ತು ಶಿಗ್ಗಾಂವಿಯ ವಿವಿಧ ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳ ಮೇಲೆ ದಾಳಿ  

ಹಾವೇರಿ 09:  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಗುರುವಾರ   ಹಾನಗಲ್ ಹಾಗೂ ಶಿಗ್ಗಾಂವ ಪಟ್ಟಣದ ವಿವಿಧ  ಧೂಮಪಾನ ಅಡ್ಡಾಗಳು ಹಾಗೂ  ಪಾನ್‌ಶಾಪ್‌ಗಳ ಮೇಲೆ ದಾಳಿ ನಡೆಸಿ ದಂಡ ವಸೂಲಿ ಮಾಡಿದೆ. 

ಪರವಾನಿಗೆ ಪಡೆಯದೇ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಹಾಗೂ  ಕಾಯ್ದೆ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡುತ್ತಿರುವ ಅಂಗಡಿ, ಬೇಕರಿ, ಹೋಟೆಲ್  ಮಾಲೀಕರಿಗೆ ನೋಟೀಸ್ ಜಾರಿ ಮಾಡಿ, ತಂಬಾಕು ನಿಯಂತ್ರಣ ಕಾಯ್ದೆ-2003ರ ಕಲಂ-6ಬಿ  ಅಡಿಯಲ್ಲಿ 4 ಪ್ರಕರಣಗಳಿಂದ ರೂ.350/- ಹಾಗೂ ಕಲಂ-4ರಡಿಯಲ್ಲಿ 19 ಪ್ರಕರಣಗಳಿಂದ ರೂ.2150 ಸೇರಿ ಒಟು ರೂ.2,500/-ದಂಡ  ವಸೂಲಿ ಮಾಡಲಾಗಿದೆ. ಪರೋಕ್ಷವಾಗಿ ತಂಬಾಕು ಜಾಹೀರಾತು ಮಾಡುವ ಐದು ಫಲಕಗಳನ್ನು ತೆರವುಗೊಳಿಸಲಾಗಿದೆ.  

ಈ ತನಿಖಾ ದಾಳಿ ತಂಡದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ  ಕೋಶದ ಸಲಹೆಗಾರ ಡಾ.ಸಂತೋಷ ದಡ್ಡಿ, ಸಮಾಜ ಕಾರ್ಯಕರ್ತ ದಾದಾಪೀರ ಹುಲಿಕಟ್ಟಿ,  ಆಹಾರ ಸುರಕ್ಷತಾ ಅಧಿಕಾರಿ ಜಿ.ವಿ.ಕುಂದಗೋಳ,  ಆರೋಗ್ಯ ನೀರೀಕ್ಷಕರಾದ ವಿರೇಂದ್ರ ಮತ್ತು ಪ್ರಕಾಶ ಕಿತ್ತೂರ  ಹಾಗೂ ಮಹೇಶ ಕುಮ್ಮೂರ ಉಪಸ್ಥಿತರಿದ್ದರು.