ಅಥಣಿ ವೀರಶೈವ ಲಿಂಗಾಯತ ಮಹಿಳಾ ಘಟಕದಿಂದ ಸಾಧಕೀಯರಿಗೆ ಸನ್ಮಾನ

Athani Veerashaiva Lingayat Women's Unit felicitates achievers

ಅಥಣಿ ವೀರಶೈವ ಲಿಂಗಾಯತ ಮಹಿಳಾ ಘಟಕದಿಂದ ಸಾಧಕೀಯರಿಗೆ ಸನ್ಮಾನ

ಅಥಣಿ, 11; ಅಖಿಲ ಭಾರತ ವೀರಶೈವ ಲಿಂಗಾಯತ ಮಹಿಳಾ ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಸಾಧಕರಿಗೆ ಸನ್ಮಾನ ಸಮಾರಂಭ ಮತ್ತು ಮಹಿಳೆಯರಿಗಾಗಿ ಅಗ್ನಿ ರಹಿತ ಹೊಸ ರುಚಿ ಸ್ಪರ್ಧೆ ಆಯೋಜಿಸಲಾಗಿತ್ತು.  

     ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸದಸ್ಯೆ  ಮೃಣಾಲಿನಿ ದೇಶಪಾಂಡೆ, ರೈತ ಮಹಿಳೆ ಜಯಶ್ರೀ ಸಂತಿ, ಸಂಗೀತ ಕಲಾವಿದೆಯರಾದ ದೀಕ್ಷಾ ಮತ್ತು ಭಾರತಿ, ಅಕ್ಕ ಪ್ರಸಾದ ನಿಲಯದ ರೂಪಾ ಪಾಟೀಲ, ಕವಿಯತ್ರಿ ಭಾರತಿ ಅಲಿಬಾದಿ, ಹಿರಿಯರಾದ ಯಶೋಧಾ ಕುಲಗುಡೆ, ವೈದ್ಯೆ ಡಾ.ವಿಜಯಾ ಗಸ್ತಿ  ರಾಜ್ಯಮಟ್ಟದ ಸಾವಿತ್ರಿಬಾಯಿ ಪುಲೆ ಉತ್ತಮ ಪ್ರಶಸ್ತಿ ಪುರಸ್ಕೃತ ಚೆನ್ನಕ್ಕಾ ಅಂದಾನಿಮಠ, ಸುಕನ್ಯಾ ವೃದ್ಧಾಶ್ರಮದ ವ್ಯವಸ್ಥಾಪಕಿ ಭಾಗ್ಯವಂತಿ ಬಿರಾದಾರ, ಉದ್ಯಮಿ ರಾಜಶ್ರೀ ಜರಳಿ ಸೇರಿದಂತೆ 40 ಮಹಿಳಾ ಸಾಧಕೀಯರನ್ನು  ಗುರುತಿಸಿ ಸತ್ಕರಿಸಲಾಯಿತು.        ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ  ಪ್ರಿಯಂವದಾ ಅಣೆಪ್ಪನವರ, ವೀರಶೈವ ಲಿಂಗಾಯತ ಮಹಿಳಾ ಘಕದಿಂದ ಕಳೆದ ಹತ್ತಾರು ವರ್ಷಗಳಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ಮುಂದೆಯೂ ಸಹ ಹೊಸ ಹೊಸ ಮಹಿಳಾ ಸಾಧಕೀಯರನ್ನು ಗುರುತಿಸಿ ಗೌರವಿಸುತ್ತೇವೆ ಎಂದರು. 

       ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ, ಮಹಿಳೆಯರು ಇಂದಿಗೂ ತಮ್ಮ ತಮ್ಮ ಅಡುಗೆ ಮನೆ ಕೆಲಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿರುತ್ತಾರೆ ಇಂತಹ ಸಂದರ್ಭದಲ್ಲಿಯೂ ಸಹ ವೀರಶೈವ ಲಿಂಗಾಯತ ಮಹಿಳಾ ಘಟಕದ ಮಹಿಳೆಯರು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿರುವುದು ಇತರರಿಗೂ ಮಾದರಿಯಾಗಿದೆ ಎಂದ ಅವರು ವಿಶ್ವ ಮಹಿಳಾ ದಿನಾಚರಣೆ ಕೇವಲ ಮಾರ್ಚ 8 ಕ್ಕೆ ಮಾತ್ರ ಸೀಮಿತಗೊಳಿಸದೇ ಇಡೀ ವರ್ಷ ಮಹಿಳೆಯರಾದ ನಾವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿ ಅಪ್ಪಾಸಾಹೇಬ ಅಲಿಬಾದಿ ಇವರಿಗೆ ಮಹಿಳಾ ಘಟಕದಿಂದ ವಚನಾನುರಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ, ಕವಿ ಅಪ್ಪಾಸಾಹೇಬ ಅಲಿಬಾದಿ, ಮಹಿಳೆಯರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳೊಂದಿಗೆ ಸಾಹಿತ್ಯದಲ್ಲಿಯೂ ಆಸಕ್ತಿ ತೋರಬೇಕು ಆಗ ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಎಂದ ಅವರು ಇಂದು ಸನ್ಮಾನಿಸಿದ ಸಾಧಕ ಮಹಿಳೆಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನೇಕ ವರ್ಷಗಳಿಂದ ಸಾಧನೆ ಮಾಡುತ್ತ ಬಂದಿದ್ದಾರೆ ನಾವು ಅವರಿಂದ ಪ್ರೇರಣೆ ಪಡೆಯೋಣ ಎಂದರು. 

        ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಯಶ್ರೀ ಮಹಾಜನ ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ, ದೇಶ ಸಂರಕ್ಷಣೆ, ರಾಜಕೀಯ, ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದರು.        ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ನೇಮಗೌಡ ವಹಿಸಿದ್ದರು. ಗೀತಾ ಸ್ವಾಗತಿಸಿದರು, ಘಟಕದ  ಕಾರ್ಯದರ್ಶಿ ಭಾಗ್ಯಶ್ರೀ  ಕಮತಗಿ ಪರಿಚಯಿಸಿದರು. ಐರಾವತಿ ಕೌಲಾಪುರ ನಿರೂಪಿಸಿದರು, ಪ್ರಭಾ ಬೋರಗಾಂವಕರ ವಂದಿಸಿದರು. ನೀಲಾಂಬಿಕಾ ನೇಮಗೌಡ,  ವಿಶಾಲಾಕ್ಷಿ ಅಂಬಿ, ವಿದ್ಯಾ ಬುರ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.