ವಿಜಯನಗರ, ನ 25: ಅನರ್ಹ ಶಾಸಕ ಆನಂದ್ ಸಿಂಗ್ ಮತ್ತೆ ಬಿಜೆಪಿಗೆ ಹೋಗುವುದಾಗಿದ್ದರೆ ಕಾಂಗ್ರೆಸ್ ಸೇರಿದ್ದಾರೂ ಏಕೆ?. ಆತ ಕಾಂಗ್ರೆಸ್‌ನಿಂದ ಗೆದ್ದ ಮೊದಲ ದಿನವೇ ಪಕ್ಷಕ್ಕೆ ಟೋಪಿ ಹಾಕಲೆತ್ನಿಸಿದ್ದ ನಯವಂಚಕ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರದಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 2008 ಹಾಗೂ 2013ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಆನಂದ್‌ಸಿಂಗ್ 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೈತ್ರಿ ಸರ್ಕಾರಕ್ಕೆ ದ್ರೋಹವೆಸಗಿ ಮತ್ತೆ ಬಿಜೆಪಿ ಸೇರಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ವಿಜಯನಗರವನ್ನು ಜಿಲ್ಲೆ ಮಾಡುವ ಬಗ್ಗೆ ಏಕೆ ಮಾತನಾಡಲಿಲ್ಲ. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ ಎನ್ನುವ ಮಾತಿನಲ್ಲಿ ಯಾವ ಅರ್ಥವಿದೆ ಎಂದು ಕಿಡಿಕಾರಿದರು.
ಆನಂದ್ ಸಿಂಗ್ ಕಷ್ಟಪಟ್ಟು ಹಣ ಗಳಿಸಿಲ್ಲ. ಬಳ್ಳಾರಿ ಜಿಲ್ಲೆಯ ಮಣ್ಣಿಗೆ ಬೆಲೆಯಿದ್ದು, ಇಲ್ಲಿನ ಸಂಪತ್ತನ್ನು ಲೂಟಿಗೈದು ಚೈನಾಕ್ಕೆ ಮಾರಾಟ ಮಾಡಿ ಶ್ರೀಮಂತರಾಗಿದ್ದಾರೆ. ಇಲ್ಲಿನ ಜನರ ಮಣ್ಣನ್ನೇ ಅಗೆದು ಅವರ ಹಣವನ್ನೇ ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮಿಂದ ಸಹಾಯ ಪಡೆದು ನಯವಂಚನೆ ಮಾಡಿ ಬಳಿಕ ಬಿಜೆಪಿಗೆ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರದಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ವಿಜಯನಗರದ ಅಭಿವೃದ್ಧಿಗೆ 179 ಕೋಟಿ ಅನುದಾನ ನೀಡಿದ್ದೇ. ರೈತರ ಸಾಲಮನ್ನಾ ಮಾಡಿದ್ದೇ. ಆದರೆ ತಾವು ಮಾಡಿದ ಒಳ್ಳೆಯ ಕೆಲಸಗಳು ಪ್ರಚಾರದ ಸರಕಾಗಲೇ ಇಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಚುನಾವಣೆಗೆ ಜನರ 351ಕೋಟಿ ರೂ.ತೆರಿಗೆ ಹಣವನ್ನು ಖರ್ಚು ಮಾಡುತ್ತಿದ್ದು, ಇದೇ ಹಣವನ್ನು ಜನರ ಅಭಿವೃದ್ಧಿಗಾಗಿ ಬಳಸಬಹುದಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆ ಎದುರಾಗಿರುವ ಒಂದೊಂದು ಕ್ಷೇತ್ರಕ್ಕೆ ಜನರ ತೆರಿಗೆಯಿಂದ 50 ಕೋಟಿ ರೂ.ಗಳಷ್ಟು ಹಣ ಸಂಗ್ರಹಿಸಿದ್ದಾರೆ ಎಂದರು.
ಅನರ್ಹರಿಗಾಗಿ ಪ್ರಾಣವನ್ನು ಕೊಡುತ್ತೇನೆ ಎನ್ನುವ ಯಡಿಯೂರಪ್ಪ ಒಂದು ದಿನವೂ ರಾಜ್ಯದ ಜನರಿಗಾಗಿಯಾಗಲೀ, ನೆರೆ ಸಂತ್ರಸ್ತರಿಗಾಗಲೀ ಪ್ರಾಣ ನೀಡುತ್ತೇನೆ ಎಂದು ಹೇಳಲೇ ಇಲ್ಲ. ಒಂದು ವೇಳೆ ಜನರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರೆ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದೆ ಎಂದು ಲೇವಡಿ ಮಾಡಿದರು.
ರಾಜ್ಯವೂ ಸೇರಿದಂತೆ ದೇಶದಲ್ಲಿ ಏನಾಗುತ್ತಿದೆ ಎಂದು ಜನರೇ ಚಿಂತನೆ ನಡೆಸಬೇಕು. 2018ರಲ್ಲಿ ಕಾಂಗ್ರೆಸ್‌ಗಾಗಲಿ ಬಿಜೆಪಿಗಾಗಲಿ ಬಹುಮತ ಬರಲಿಲ್ಲ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಮಾಡಿದ ಅಪಪ್ರಚಾರದಿಂದಾಗಿ ಅಲ್ಪಸಂಖ್ಯಾತ ಮತಗಳು ಜೆಡಿಎಸ್‌ನ ಕೈತಪ್ಪಿ ಹೋಗಿ ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತಾಯಿತು. ಜೆಡಿಎಸ್‌ಗೆ 60-65 ಸ್ಥಾನಗಳು ಬಂದಿದ್ದರೆ ಈಗಿನ ಉಪಚುನಾವಣೆ ಎದುರಾಗುತ್ತಿರಲಿಲ್ಲ ಎಂದರು.
ಯಾವುದೇ ತಪ್ಪು ಮಾಡದಿದ್ದರೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಹದಿನಾಲ್ಕು ತಿಂಗಳ ಕಾಲ ಸರ್ಕಸ್ ಮಾಡಿ ಹಿಂಸೆ ಅನುಭವಿಸಿ ಅವಮಾನ ಎದುರಿಸಬೇಕಾಯಿತು. ತಮಗೆ ಸಿದ್ದರಾಮಯ್ಯ ಯೋಜನೆಗಳನ್ನೂ ಮುಂದುವರೆಸಿ ರೈತರ ಸಾಲಮನ್ನಾ ಮಾಡಲು ಸಾಧ್ಯವಾಯಿತು ಎಂದಮೇಲೆ ಯಡಿಯೂರಪ್ಪಗೆ ಏಕೆ ಇನ್ನೂ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಡವರ ಪರ ಇಲ್ಲವೇ ಇಲ್ಲ. ಯುವಕರಿಗೆ ನಿರುದ್ಯೋಗ, ಬೆಲೆ ಏರಿಕೆ, ಕೈಗಾರಿಕೆಗಳ ನಾಶ, ಉದ್ಯೋಗ ಕಡಿತ ,ಆರ್ಥಿಕ ಹಿಂಜರಿತ ಇವೇ ಮೋದಿ ದೇಶಕ್ಕೆ ನೀಡಿದ ಕೊಡುಗೆ ಎಂದು ಲೇವಡಿ ಮಾಡಿದರು.
ನಾಯಕ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಿದ್ದರೆ, ಈ ಸಮಾಜದಿಂದ 14 ಶಾಸಕರು, ಒಬ್ಬರು ಸಂಸದರಾಗಿದ್ದರೆ ಅದಕ್ಕೆಲ್ಲ ತಂದೆ ದೇವೇಗೌಡರೇ ಕಾರಣ. ಇದರಲ್ಲಿ ಬಿಜೆಪಿಯ ಶ್ರೀರಾಮುಲು ಪಾತ್ರ ಇಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಜಯನಗರ ಜೆಡಿಎಸ್ ಅಭ್ಯರ್ಥಿ ಎನ್.ಎಂ.ನಬಿ ಮಾತನಾಡಿ, ಮೈತ್ರಿ ಸರ್ಕಾರದಲ್ಲಿ ಹದಿನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು, ರೈತರ ಸಾಲಮನ್ನಾ ಯೋಜನೆ ತಮಗೆ ಶ್ರೀರಕ್ಷೆಯಾಗಿದೆ. ಇವರ ಅಭಿವೃದ್ಧಿ ಚಿಂತನೆಗಳು ಯುವಕರು ಜೆಡಿಎಸ್‌ನತ್ತ ಆಕರ್ಷಿತವಾಗುವಂತೆ ಮಾಡಿದೆ ಎಂದರು.
ಅನರ್ಹರ ರಾಜಕೀಯ ಚೆಲ್ಲಾಟದಿಂದ ಉಪಚುನಾವಣೆ ಎದುರಾಗಿದೆ. ನ್ಯಾಯಾಲಯವೇ ಇವರನ್ನು ಅನರ್ಹರು ಎಂದು ಜನತಾ ನ್ಯಾಯಾಲಯದ ಮುಂದೆಯೂ ಅವರು ಮತ್ತೊಮ್ಮೆ ಅನರ್ಹರೆಂದು ಸಾಬೀತಾಗಬೇಕು ಎನ್ನುವ ಕಾರಣದಿಂದಲೇ ಇವರು ಚುನಾವಣೆಗೆ ಸ್ಪರ್ಧಿಸಬಹುದೆಂದು ಹೇಳಿದೆ. ಅನರ್ಹರ ಶ್ರೀಮಂತಿಕೆಯ ಅಹಂಕಾರಕ್ಕೆ ತಕ್ಕಪಾಠ ಕಲಿಸಬೇಕು. ಅನರ್ಹ ಶಾಸಕ ಆನಂದ್‌ಸಿಂಗ್ ತಮ್ಮ ಅರಮನೆ ನಿರ್ಮಿಸಲೆಂದು ರೈತರು ಕಬ್ಬು ಅರೆಯುವ ಕಾರ್ಖಾನೆಯನ್ನು ಮುಚ್ಚಿಸಿದ್ದಾರೆ. ತಮ್ಮನ್ನು ಕ್ಷೇತ್ರದ ಜನತೆ ಉಪಚುನಾವಣೆಯಲ್ಲಿ ಗೆಲ್ಲಿಸಿದ್ದಲ್ಲಿ ಮುಚ್ಚಿರುವ ಮೂರು ಕಾರ್ಖಾನೆಗಳನ್ನು ಮತ್ತೆ ಪುನರ್‌ಆರಂಭಿಸುವಂತೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.